ಹಾಂಕಾಂಗ್: ಪ್ರಜಾಪ್ರಭುತ್ವ ಪರ ಹೋರಾಟಗಾರ ಬಿಡುಗಡೆ
ಹಾಂಕಾಂಗ್, ಜೂ. 17: ಹಾಂಕಾಂಗ್‌ನಲ್ಲಿ ಐತಿಹಾಸಿಕ ಬೃಹತ್ ಸರಕಾರ ವಿರೋಧಿ ಪ್ರತಿಭಟನೆಗಳು ನಡೆದಿರುವಂತೆಯೇ, ಪ್ರಜಾಪ್ರಭುತ್ವ ಪರ ಹೋರಾಟಗಾರ ಜೋಶುವ ವೊಂಗ್‌ರನ್ನು ಸೋಮವಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಚೀನಾ ಪರವಾಗಿರುವ ಹಾಂಕಾಂಗ್ ಆಡಳಿತಗಾರ್ತಿ ಕ್ಯಾರೀ ಲ್ಯಾಮ್ ಅಧಿಕಾರದಿಂದ ಕೆಳಗಿಳಿಯುವಂತೆ ಬಿಡುಗಡೆಗೊಂಡ ಬಳಿಕ ಅವರು ಕರೆನೀಡಿದ್ದಾರೆ.
‘‘ಹಾಂಕಾಂಗ್‌ನ ನಾಯಕಿಯಾಗಿ ಮುಂದುವರಿಯುವುದಕ್ಕೆ ಅವರಿಗೆ ಅರ್ಹತೆಯಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಬೇಕು ಹಾಗೂ ರಾಜೀನಾಮೆ ನೀಡಬೇಕು’’ ಎಂದರು.
2014ರಲ್ಲಿ ನಡೆದ ಬೃಹತ್ ಪ್ರಜಾಪ್ರಭುತ್ವ ಪರ ಧರಣಿಯ ನೇತೃತ್ವವನ್ನು ವಹಿಸಿಕೊಂಡಿರುವುದಕ್ಕಾಗಿ ಅವರನ್ನು ಮೇ ತಿಂಗಳಲ್ಲಿ ಜೈಲಿಗೆ ಹಾಕಲಾಗಿತ್ತು.
ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡುವ ಹಾಂಕಾಂಗ್‌ನ ಅತ್ಯಂತ ವಿವಾದಾಸ್ಪದ ಮಸೂದೆಯನ್ನು ವಿರೋಧಿಸಿ ಲಕ್ಷಾಂತರ ಜನರು ಕಳೆದ ವಾರ ಬೀದಿಗಿಳಿದು ಪ್ರತಿಭಟನೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಪ್ರಜಾಪ್ರಭುತ್ವ ಪರ ಹೋರಾಟವು ಈಗ ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಮತ್ತು ಚೀನಾ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟಿದೆ.
ಪ್ರತಿಭಟನೆಗಳು ಮತ್ತು ನಾಗರಿಕ ಅಸಹಕಾರ ಚಳವಳಿಗಳನ್ನು ಮುಂದುವರಿಸುವಂತೆ ಅವರು ಜನರಿಗೆ ಕರೆ ನೀಡಿದರು.