ಜನಾಂಗೀಯ ಟೀಕೆಗಳಿಂದ ನೊಂದ ಆರ್.ಬಿ.ವಿವಿಯ ನಾಲ್ವರು ವಿಭಾಗ ಮುಖ್ಯಸ್ಥರ ರಾಜೀನಾಮೆ

ಕೋಲ್ಕತಾ,ಜೂ.18: ತೃಣಮೂಲ ಛಾತ್ರ ಪರಿಷದ್(ಟಿಸಿಪಿ) ತಮ್ಮ ವಿರುದ್ಧ ಮಾಡಿರುವ ಜನಾಂಗೀಯ ಟೀಕೆಗಳಿಂದ ನೊಂದಿರುವ ರವೀಂದ್ರ ಭಾರತಿ ವಿವಿಯ ನಾಲ್ಕು ವಿಭಾಗ ಮುಖ್ಯಸ್ಥರು ಕುಲಪತಿ ಸವ್ಯಸಾಚಿ ಬಸು ರಾಯ್ ಅವರಿಗೆ ಸೋಮವಾರ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದು,ರಾಜ್ಯದ ಶಿಕ್ಷಣ ಸಚಿವರೀಗ ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿದ್ದಾರೆ.
ಆದರೆ ಟಿಪಿಸಿ ಆರೋಪವನ್ನು ನಿರಾಕರಿಸಿದೆ.
ಕೆಲವು ಬೋಧಕೇತರ ಸಿಬ್ಬಂದಿಗಳೂ ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದೂ ಈ ವಿಭಾಗ ಮುಖ್ಯಸ್ಥರು ಹೇಳಿದ್ದಾರೆ.
ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳು ನಿರಾಧಾರ ಎಂದು ಹೇಳಿರುವ ಟಿಸಿಪಿ ಕಾರ್ಯಕರ್ತರು, ಪ್ರೊಫೆಸರ್‌ಗಳು ನಿಯಮಿತವಾಗಿ ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತ್ಯಾರೋಪಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ರಾಯ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರು,ರವೀಂದ್ರನಾಥ ಟಾಗೋರ್ ಅವರ ಹೆಸರಿನ ಈ ಸಂಸ್ಥೆಯಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ. ಇಂತಹ ವಿಷಯಗಳು ಸಂಸ್ಥೆಯ ವರ್ಚಸ್ಸಿಗೆ ಕಳಂಕವನ್ನು ತರುತ್ತವೆ. ಇದು ನಡೆಯಬಾರದಿತ್ತು. ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ವಿಚಾರಣೆಯಲ್ಲಿ ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.







