ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಅತ್ಯಾಚಾರಿ ಎಂದು ಕರೆದ ರ‍್ಯಾಪರ್ ಹರ್ದ್ ಕೌರ್

ಹೊಸದಿಲ್ಲಿ, ಜೂ. 18: ಸಾಮಾಜಿಕ ಜಾಲ ತಾಣದಲ್ಲಿ ನಿಂದನಾತ್ಮಕ ಪದಗಳನ್ನು ಬಳಸುವ ಮೂಲಕ ರ‍್ಯಾಪರ್ (ರ‍್ಯಾಪ್ ಗಾಯಕಿ) ಹರ್ದ್ ಕೌರ್ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಜೂನ್ 17ರಂದು ಹರ್ದ್ ಕೌರ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರನ್ನು ‘ಭಯೋತ್ಪಾದಕ’ ಹಾಗೂ ‘ಜನಾಂಗೀಯವಾದಿ’ ಎಂದು ಕರೆದಿದ್ದರು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ‘ಕೇಸರಿ ಅತ್ಯಾಚಾರಿ’ ಎಂದು ಕರೆದಿದ್ದರು.
ಮುಂಬೈಯ 26/11ರ ಭಯೋತ್ಪಾದ ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ವರಿಷ್ಠ ಹೇಮಂತ್ ಕರ್ಕರೆ ಕುರಿತು ಎಸ್.ಎಂ. ಮುಶ್ರಿಫ್ ಬರೆದೆ ‘ಹು ಕಿಲ್ಲ್ ಡ್ ಕರ್ಕರೆ ?’ ಪುಸ್ತಕದ ಚಿತ್ರವನ್ನು ಹರ್ದ್ ಕೌರ್ ಪೋಸ್ಟ್ ಮಾಡಿದ್ದರು. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಕೂಡ ಅವರು ಟೀಕಿಸಿದ್ದರು. ಹರ್ದ್ ಕೌರ್ ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಆರೆಸ್ಸೆಸ್ ವರಿಷ್ಠರ ಬಗ್ಗೆ ಟೀಕಿಸಿರುವುದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ವಿವಾದ ಸೃಷ್ಟಿಸಿದೆ. ಹರ್ದ್ ಕೌರ್ ಅವರ ಟೀಕೆ ಹಾಗೂ ಭಾಷೆಯ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹರ್ದ್ ಕೌರ್ ಹೇಳಿಕೆಗೆ ನೆಟ್ಟಿಗರು ಮಾಡಿದ ಆಕ್ಷೇಪಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಲ್ಲಿ ಕೌರ್ ನಿಂದನೀಯ ಭಾಷೆ ಬಳಸಿದ್ದಾರೆ. ಇದೇ ಸಂದರ್ಭ ತನ್ನ ನಿಲುವನ್ನು ಬೆಂಬಲಿಸಿದ ಅಭಿಮಾನಿಗಳನ್ನು ಪ್ರಶಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ.





