ಮರಳು ಮಾಫಿಯಾ
ಮಾನ್ಯರೇ,
ರಾಜ್ಯದೆಲ್ಲ್ಲೆಡೆ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಕೆಲವು ವರ್ಷಗಳ ಹಿಂದೆ ಒಂದು ಲಾರಿ ಮರಳು ಕೇವಲ ಹತ್ತು ಸಾವಿರಕ್ಕೆ ಸಿಗುತ್ತಿತ್ತು ಈಗ ಇದರ ಬೆಲೆ 70-80 ಸಾವಿರಕ್ಕೇರಿದೆ. ಈ ಲಾಭದ ರುಚಿಯಿಂದ ಮರಳು ಬಗೆಯುವ ಮತ್ತು ಸಾಗಿಸುವ ಸಂಘಟಿತ ಜಾಲಗಳೇ ಹುಟ್ಟಿಕೊಂಡಿವೆ. ಉದಾಹರಣೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಿಂದ 20 ಕಿ.ಮೀ. ದೂರದ ಬೆಂಗಳೂರು ಹೆದ್ದಾರಿಯಲ್ಲಿ ಬರುವ ಕೈನಡು ಗ್ರಾಮದಲ್ಲಿ ಕಳೆದ ಆರು ತಿಂಗಳಿನಿಂದ ಅಕ್ರಮವಾಗಿ ಮರಳು ದಂಧೆ ನಡೆಯುತ್ತಲೇ ಇದೆ. ಗ್ರಾಮದ ಹೊರವಲಯದಲ್ಲಿ ದೊಡ್ಡ ಕೆರೆ ಇದ್ದು ಆ ಕೆರೆಯಲ್ಲಿನ ಮರಳು ಬಗೆದು ಒಂದು ದೊಡ್ಡ ಕೂಪ ನಿರ್ಮಾಣ ಮಾಡಿದ್ದಾರೆ.
ಗ್ರಾಮಸ್ಥರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ ಈ ಮರಳು ದರೋಡೆಕೋರರು. ಈ ಅಕ್ರಮವನ್ನು ತಡೆಯಲು ಯಾವ ಅಧಿಕಾರಿಗಳೂ ಮುಂದೆ ಬರುತ್ತಿಲ್ಲ. ತಮಗೂ ಅದಕ್ಕೂ ಸಂಬಂಧ ಇಲ್ಲವೇನೋ ಎಂಬಂತೆ ಕೈ ಕಟ್ಟಿ ಕುಳಿತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಮರಳು ಮಾಫಿಯಾದ ಬಗ್ಗೆ ಕಠಿಣ ಕ್ರಮ ಜರುಗಿಸಿಯಾರೇ?
-ಮಂಜುನಾಥ್ ಎಸ್. ಕೈನಡು, ಹೊಸದುರ್ಗ





