ನಿಷೇಧಿತ ಹತ್ತಿ ಬೀಜ ದಾಸ್ತಾನಿರಿಸಿದ್ದ ಆರೋಪದಲ್ಲಿ ರೈತನ ಬಂಧನ

ಮುಂಬೈ, ಜೂ.20: ನಿಷೇಧಿತ ಹೈಬ್ರೀಡ್ ತಳಿಯ ಟಾಲರೆಂಟ್ ಬಿಟಿ(ಎಚ್‌ಟಿಬಿಟಿ) ಹತ್ತಿಬೀಜವನ್ನು ಮನೆಯಲ್ಲಿ ದಾಸ್ತಾನಿರಿಸಿದ್ದ ಆರೋಪದಲ್ಲಿ ಮಹಾರಾಷ್ಟ್ರದ ಉಮ್ರಾದ್ ಗ್ರಾಮದ ರೈತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ಪ್ರಪ್ರಥಮ ಬಾರಿಗೆ ದೇಶದಲ್ಲಿ ಈ ರೀತಿಯ ಬಂಧನ ಪ್ರಕರಣ ನಡೆದಿದೆ. 41 ವರ್ಷದ ವಸಂತ್ ಮುಲೆ ಬಂಧಿತ ರೈತ. ಈತನನ್ನು ಬುಧವಾರ ಬುಲ್ದಾನಾ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಜಾಮೀನು ನಿರಾಕರಿಸಿ ಆರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 1996ರ ಬೀಜಕಾಯ್ದೆಯ ಉಲ್ಲಂಘನೆ, ಮೋಸ ಹಾಗೂ ವಂಚನೆ ಪ್ರಕರಣಗಳನ್ನು ಮುಲೆ ವಿರುದ್ಧ ದಾಖಲಿಸಲಾಗಿದೆ. ನಿಷೇಧಿತ ಎಚ್‌ಟಿಬಿಟಿಯ 20 ಪ್ಯಾಕೆಟ್ ಬೀಜಗಳು(ತಲಾ 450 ಗ್ರಾಂ ತೂಕ) ಮಲೆಯ ಮನೆಯಲ್ಲಿ ಪತ್ತೆಯಾಗಿದೆ. ಈತ ಈ ಬೀಜಗಳನ್ನು ಇಲ್ಲಿಯ ಇತರ ರೈತರಿಗೆ ಮಾರುತ್ತಿದ್ದ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ನಿಷೇಧಿತ ಬೀಜಗಳನ್ನು ಬೆಳೆಸುವವರು ಅಥವಾ ತಮ್ಮ ಬಳಿ ಇರಿಸಿಕೊಂಡಿರುವ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಕೃಷಿ ಸಚಿವ ಸುದಭಾವು ಖೋಟ್ ಎಚ್ಚರಿಸಿದ್ದಾರೆ.
ಹೈಬ್ರೀಡ್ ತಳಿಯ ಬೀಜಗಳ ಪರವಾದ ಅಭಿಯಾನಕ್ಕೆ ಕಳೆದ ಎರಡು ವಾರಗಳಿಂದ ಮಹಾರಾಷ್ಟ್ರದಲ್ಲಿ ಚಾಲನೆ ದೊರೆತಿದೆ. ದಿವಂಗತ ಶರದ್ ಜೋಷಿ ಸಂಸ್ಥಾಪಿಸಿರುವ ಶೇತ್ಕರಿ ಸಂಘಟನೆ ಎಂಬ ರೈತ ಸಂಘವು ರಾಜ್ಯದ ವಿವಿಧೆಡೆ ಎಚ್‌ಟಿಬಿಟಿ ಬೀಜ ಬಿತ್ತುವ ಅಭಿಯಾನವನ್ನು ನಡೆಸಿದೆ. ಜೂನ್ 10ರಂದು ಅಕೋಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಒಟ್ಟುಸೇರಿ, ಸುಮಾರು 2 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಎಚ್‌ಟಿಬಿಟಿ ಹತ್ತಿಬೀಜವನ್ನು ಬಿತ್ತಿದ್ದಾರೆ.
ಬದನೆ ಹಾಗೂ ಹತ್ತಿಯ ನಿಷೇಧಿತ ಹೈಬ್ರೀಡ್ ಬೀಜದ ಪರ ಒಲವು ವ್ಯಕ್ತಪಡಿಸಿರುವ ರೈತರು, ಈ ಬೀಜಗಳಿಂದ ದೀರ್ಘಾವಧಿಯಲ್ಲಿ ತಮಗೆ ಲಾಭವಾಗುತ್ತದೆ. ತಳಿವರ್ಧಿತ ಬೆಳೆಗಳನ್ನು ಬೆಳೆಸುವ ಖರ್ಚು ಕಡಿಮೆ, ಕ್ರಿಮಿಕೀಟಗಳ ಹಾವಳಿಗೆ ಸುಲಭದಲ್ಲಿ ಬಗ್ಗುವುದಿಲ್ಲ ಹಾಗೂ ಉತ್ತಮ ಇಳುವರಿ ನೀಡುತ್ತವೆ. ಅಲ್ಲದೆ ಕಳೆ ನಿವಾರಣೆಗೆ ಸಿಂಪಡಿಸುವ ಗ್ಲೈಫೊಸೇಟ್‌ನ ಘಾಟನ್ನು ಸಹಿಸುವ ಶಕ್ತಿ ಹೊಂದಿರುತ್ತವೆ ಎಂಬುದು ರೈತರ ಹೇಳಿಕೆಯಾಗಿದೆ. ಇದೀಗ ವಸಂತ ಮುಲೆಯ ಪರ ಹೋರಾಡಲು ಸಂಘಟನೆ ನಿರ್ಧರಿಸಿದೆ. ಇದೀಗ ರೈತರು ಬದಲಾವಣೆ ಬಯಸುತ್ತಿದ್ದಾರೆ.
ಎಚ್‌ಟಿಬಿಟಿ ನಿಷೇಧ ತೆರವಾಗುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಶೇತ್ಕಾರಿ ಸಂಘಟನೆಯ ರಾಜ್ಯಾಧ್ಯಕ್ಷ ಅನಿಲ್ ಘಣವತ್ ಹೇಳಿದ್ದಾರೆ. ಭಾರತದಲ್ಲಿ ತಳಿ ಮಾರ್ಪಡಿಸಿದ ಬೀಜ ಬೆಳೆಯಲು ಯೋಗ್ಯವೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಮಾನ ನೀಡುವ ‘ದಿ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ’ ಎಚ್‌ಟಿಬಿಟಿ ಬೆಳೆಯಲು ಇದುವರೆಗೆ ಅಂಗೀಕಾರ ನೀಡಿಲ್ಲ.







