ಪಡಿತರ ವಿತರಣಾ ವ್ಯವಸ್ಥೆ ಬಲಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಬೆಂಗಳೂರು, ಜೂ.20: ಪಡಿತರ ವಿತರಣಾ ವ್ಯವಸ್ಥೆಯಡಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಹೆಚ್ಚು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದ ಮುಖ್ಯಮಂತ್ರಿ, ಮುಕ್ತ ಮಾರುಕಟ್ಟೆಯಿಂದ ತೊಗರಿಬೇಳೆ ಖರೀದಿಸಲು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್‌ಗೆ ಸರಕಾರ ವ್ಯವಸ್ಥೆ ಮಾಡಿಕೊಂಡಿದೆ ಎಂದರು.
ಪಡಿತರ ವ್ಯವಸ್ಥೆಯಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಉಚಿತವಾಗಿ ತಲಾ 7 ಕೆಜಿ ಅಕ್ಕಿ ನೀಡಲು ಅನ್ನಭಾಗ್ಯ ಯೋಜನೆಯಡಿ ಬಜೆಟ್‌ನಲ್ಲಿ 3750 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಹಾಗೂ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಇಲಾಖೆಯು ಆಹಾರಧಾನ್ಯ ಪಡೆಯುತ್ತಿರುವ ಪಡಿತರ ಚೀಟಿದಾರರ ಕುಟುಂಬದ ಎಲ್ಲ ಸದಸ್ಯರ ಇ-ಕೆವೈಸಿಯನ್ನು ಸಂಗ್ರಹಿಸಲಾಗುತ್ತಿದ್ದು, ಜೂ.20ರಿಂದ ಜುಲೈ 15ರ ವರೆಗೆ ಇ-ಕೆವೈಸಿ ಸಂಗ್ರಹವನ್ನು ನಿಲ್ಲಿಸಲಾಗಿದೆ’
-ಆಯುಕ್ತರು, ಆಹಾರ ನಾಗರಿಕ ಸರಬರಾಜು ಇಲಾಖೆ







