ಏನಿದು ಹೈಪೊನಾಟ್ರಿಮಿಯಾ.....?
ನಮ್ಮ ರಕ್ತದಲ್ಲಿ ಸೋಡಿಯಂ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದಾಗ ಉಂಟಾಗುವ ಆರೋಗ್ಯ ಸ್ಥಿತಿಯನ್ನು ಹೈಪೊನಾಟ್ರಿಮಿಯಾ ಎಂದು ಕರೆಯಲಾಗುತ್ತದೆ. ವಿದ್ಯುದ್ವಿಚ್ಛೇದ್ಯವಾಗಿರುವ ಸೋಡಿಯಂ ಶರೀರದ ಜೀವಕೋಶಗಳಲ್ಲಿಯ ಮತ್ತು ಅದರ ಸುತ್ತಲಿನ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಹೈಪೊನಾಟ್ರಿಮಿಯಾ ಸ್ಥಿತಿಯಲ್ಲಿ ಅನಾರೋಗ್ಯದಿಂದ ಹಿಡಿದು ಅತಿಯಾದ ನೀರಿನ ಸೇವನೆಯವರೆಗೆ ಹಲವಾರು ಅಂಶಗಳು ಶರೀರದಲ್ಲಿಯ ಸೋಡಿಯಂ ಅನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ಶರೀರದಲ್ಲಿಯ ನೀರಿನ ಮಟ್ಟ ಹೆಚ್ಚುತ್ತದೆ ಮತ್ತು ಜೀವಕೋಶಗಳು ಊದಿಕೊಳ್ಳತೊಡಗುತ್ತವೆ. ಈ ಊತವು ಸೌಮ್ಯ ಸ್ವರೂಪದಿಂದ ಹಿಡಿದು ಮಾರಣಾಂತಿಕವರೆಗೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹೈಪೊನಾಟ್ರಿಮಿಯಾದ ಲಕ್ಷಣಗಳು
ವಾಕರಿಕೆ ಮತ್ತು ವಾಂತಿ,ತಲೆನೋವು,ಗೊಂದಲ,ನಿಶ್ಶಕ್ತಿ,ತಲೆ ಸುತ್ತುವಿಕೆ ಮತ್ತು ಬಳಲಿಕೆ,ಚಡಪಡಿಕೆ ಮತ್ತು ಕಿರಿಕಿರಿ,ಸ್ನಾಯುಗಳಲ್ಲಿ ನಿಶ್ಶಕ್ತಿ,ಸೆಳೆತ ಮತ್ತು ಕೋಮಾ ಇವು ಈ ಸಮಸ್ಯೆಯ ಕೆಲವು ಲಕ್ಷಣಗಳಾಗಿವೆ.
ಕಾರಣಗಳು
ಸೋಡಿಯಂ ನಮ್ಮ ಶರೀರದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಅದು ಸಹಜ ರಕ್ತದೊತ್ತಡವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ,ನರಗಳು ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಶರೀರದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ.
ರಕ್ತದಲ್ಲಿ ಸೋಡಿಯಂ ಪ್ರಮಾಣವು ಸಾಮಾನ್ಯವಾಗಿ 135ರಿಂದ 145 ಎಂಇಕ್ಯೂ/ಎಲ್‌ವರೆಗೆ ಇರುತ್ತದೆ. ಈ ಪ್ರಮಾಣವು 135 ಎಂಇಕ್ಯೂ/ಎಲ್‌ಗಿಂತ ಕೆಳಗಿಳಿದರೆ ಹೈಪೊನಾಟ್ರಿಮಿಯಾ ಉಂಟಾಗುತ್ತದೆ.
ಮೂತ್ರವರ್ಧಕಗಳು,ಖಿನ್ನತೆ ನಿರೋಧಕಗಳು ಮತ್ತು ನೋವು ನಿವಾರಕಗಳಂತಹ ಕೆಲವು ಔಷಧಿಗಳು ಸೋಡಿಯಂ ಪ್ರಮಾಣವನ್ನು ಆರೋಗ್ಯಕರ ಮಟ್ಟದೊಳಗೆ ಕಾಯ್ದುಕೊಳ್ಳುವ ಹಾರ್ಮೋನ್‌ಗಳು ಮತ್ತು ಮೂತ್ರಪಿಂಡ ಪ್ರಕ್ರಿಯೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ ಮತ್ತು ಸೋಡಿಯಂ ಮಟ್ಟ ಕುಸಿಯಲು ಕಾರಣವಾಗುತ್ತವೆ.
ಹೃದಯಾಘಾತ ಮತ್ತು ಮೂತ್ರಪಿಂಡಗಳು ಅಥವಾ ಯಕೃತ್ತನ್ನು ಬಾಧಿಸುವ ಕೆಲವು ರೋಗಗಳಿಂದಾಗಿ ಶರೀರದಲ್ಲಿಯ ಸೋಡಿಯಂ ದುರ್ಬಲಗೊಳ್ಳುತ್ತದೆ ಮತ್ತು ಅದರ ಒಟ್ಟಾರೆ ಮಟ್ಟವು ಸಾಮಾನ್ಯಕ್ಕಿಂತ ಕೆಳಗೆ ಕುಸಿಯುತ್ತದೆ.
ಆ್ಯಂಟಿ-ಡೈಯುರೆಟಿಕ್ ಹಾರ್ಮೋನ್(ಎಡಿಎಚ್) ಎನ್ನುವ ಸ್ಥಿತಿಯಲ್ಲಿ ಅತಿಯಾದ ಪ್ರಮಾಣದಲ್ಲಿ ಮೂತ್ರವರ್ಧಕ ನಿರೋಧಿ ಹಾರ್ಮೋನ್ ಉತ್ಪತ್ತಿಯಾಗುತ್ತದೆ ಮತ್ತು ಇದರಿಂದಾಗಿ ಶರೀರವು ಹೆಚ್ಚುವರಿ ನೀರನ್ನು ಮೂತ್ರದ ರೂಪದಲ್ಲಿ ಹೊರಹಾಕುವ ಮೂಲಕ ತನ್ನಲ್ಲಿಯೇ ಉಳಿಸಿಕೊಳ್ಳುತ್ತದೆ.
ದೀರ್ಘಕಾಲಿಕ ತೀವ್ರ ವಾಂತಿ ಮತ್ತು ಅತಿಸಾರ ಮತ್ತು ನಿರ್ಜಲೀಕರಣವನ್ನುಂಟು ಮಾಡುವ ಇತರ ಕಾರಣಗಳಿಂದ ಶರೀರವು ಸೋಡಿಯಮ್‌ನಂತಹ ವಿದ್ಯುದ್ವಿಚ್ಛೇದಗಳನ್ನು ಕಳೆದುಕೊಳ್ಳುತ್ತದೆ ಮತ್ತು ಎಡಿಎಚ್ ಮಟ್ಟದಲ್ಲಿ ಏರಿಕೆಯಾಗುತ್ತದೆ.
ಅತಿಯಾದ ನೀರಿನ ಸೇವನೆಯು ನೀರನ್ನು ಹೊರಹಾಕುವ ಮೂತ್ರಪಿಂಡಗಳ ಸಾಮರ್ಥ್ಯದ ಮೇಲೆ ಸವಾರಿ ಮಾಡುವ ಮೂಲಕ ಸೋಡಿಯಂ ಪ್ರಮಾಣವನ್ನು ತಗ್ಗಿಸುತ್ತದೆ. ನಾವು ಬೆವರಿನ ಮೂಲಕ ಸೋಡಿಯಂ ಕಳೆದುಕೊಳ್ಳುವುದರಿಂದ ಅತಿಯಾದ ದೈಹಿಕ ಶ್ರಮವನ್ನು ಬೇಡುವ ಚಟುವಟಿಕೆಗಳ ಸಂದರ್ಭ ಅತಿಯಾದ ನೀರನ್ನು ಸೇವಿಸುವುದು ಸಹ ರಕ್ತದಲ್ಲಿಯ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಅಡಿಸನ್ಸ್ ರೋಗವೆಂದು ಕರೆಯಲಾಗುವ ಅಡ್ರೆನಾಲ್ ಗ್ರಂಥಿಗಳ ವೈಕಲ್ಯದಿಂದಾಗಿ ಶರೀರದಲ್ಲಿ ಸೋಡಿಯಂ, ಪೊಟ್ಯಾಷಿಯಂ ಮತ್ತು ನೀರಿನ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುವ ಹಾರ್ಮೋನ್‌ಗಳನ್ನು ಉತ್ಪಾದಿಸುವ ಅವುಗಳ ಸಾಮರ್ಥ್ಯವು ಕ್ಷೀಣಿಸುತ್ತದೆ. ಥೈರಾಯ್ಡಾ ಹಾರ್ಮೋನ್‌ಗಳ ಕಡಿಮೆ ಮಟ್ಟವೂ ರಕ್ತದಲ್ಲಿ ಸೋಡಿಯಂ ಮಟ್ಟ ಕುಸಿಯುವಂತೆ ಮಾಡುತ್ತದೆ.
ಅಪಾಯವನ್ನು ಹೆಚ್ಚಿಸಬಲ್ಲ ಅಂಶಗಳು
ವಯಸ್ಸಾದವರು ಹೈಪೊನಾಟ್ರಿಮಿಯಾಕ್ಕೆ ಗುರಿಯಾಗುವ ಅಪಾಯವು ಹೆಚ್ಚಿರುತ್ತದೆ. ವಯೋಸಂಬಂಧಿತ ಬದಲಾವಣೆಗಳು,ಕೆಲವು ಔಷಧಿಗಳ ಸೇವನೆ ಮತ್ತು ದೀರ್ಘಕಾಲಿಕ ರೋಗಗಳು ಶರೀರದಲ್ಲಿಯ ಸೋಡಿಯಂ ಸಮತೋಲವನ್ನು ಕೆಡಿಸಬಹುದು. ಥಿಯಾಝೈಡ್ ಮೂತ್ರವರ್ಧಕಗಳು,ಕೆಲವು ಖಿನ್ನತೆ ನಿರೋಧಕಗಳು ಮತ್ತು ನೋವು ನಿವಾರಕಗಳು ಹೈಪೊನಾಟ್ರಿಮಿಯಾಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಮೂತ್ರಪಿಂಡ ರೋಗಗಳು, ಎಡಿಎಚ್,ಹೃದಯಾಘಾತ ಇತ್ಯಾದಿಗಳೂ ಈ ಅಪಾಯಕ್ಕೆ ತಮ್ಮ ಪಾಲು ಸಲ್ಲಿಸುತ್ತವೆ.