ದೇಶಾದ್ಯಂತ ಯೋಗ ದಿನಾಚರಣೆ

ಹೊಸದಿಲ್ಲಿ, ಜೂ.21: ಅಂತಾರಾಷ್ಟ್ರೀಯ ಯೋಗ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ದೇಶದ ವಿವಿಧೆಡೆಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳು ನಡೆಯುತ್ತಿವೆ. ರಾಂಚಿಯಲ್ಲಿ ನಡೆದ ಯೋಗ ಪ್ರದರ್ಶನದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.
ದೇಶಾದ್ಯಂತ ಹಲವು ಮಂದಿ ರಾಜಕೀಯ ಮುಖಂಡರು, ಸೆಲೆಬ್ರಿಟಿಗಳು ಕೂಡಾ ಈ ಸಂಭ್ರಮದಲ್ಲಿ ಸೇರಿಕೊಂಡಿದ್ದಾರೆ. ನಟಿ ಶಿಲ್ಪಾಶೆಟ್ಟಿ ಮುಂಬೈನಲ್ಲಿ ನಡೆದ ಸಾಮೂಹಿಕ ಯೋಗದಲ್ಲಿ ಪಾಲ್ಗೊಂಡಿದ್ದರು. ಹಲವು ಮಂದಿ ಕೇಂದ್ರ ಸಚಿವರು ಕೂಡಾ ಯೋಗ ದಿನದ ಸಂಬಂಧ ಟ್ವೀಟ್ ಮಾಡಿದ್ದು, ಅಂತಾರಾಷ್ಟ್ರೀಯ ಯೋಗದಿನದ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿವೆ.
ಗೃಹಸಚಿವ ಅಮಿತ್ ಶಾ ರೋಹ್ಟಕ್ನಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹೊಸದಿಲ್ಲಿಯ ರಾಜಪಥ್ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರೆ, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಪಕ್ಷದ ಕೇಂದ್ರ ಕಚೇರಿಯ ಎದುರಿನ ಉದ್ಯಾನವನದಲ್ಲಿ ಯೋಗಾಸನ ಮಾಡಿದರು. ಜಮ್ಮು ಕಾಶ್ಮೀರದ ಲೆಹ್ನಲ್ಲಿ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಐಟಿಬಿಪಿ ಯೋಧರು ದೊಡ್ಡಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನೌಕಾಪಡೆಯ ಯೋಧರು ಮುಂಬೈನ ಪಶ್ಚಿಮ ನೌಕಾ ಡಾಕ್ಯಾರ್ಡ್ನಲ್ಲಿ ಐಎನ್ಎಸ್ ವಿರಾಟ್ ಯುದ್ಧನೌಕೆಯಲ್ಲೇ ಯೋಗಾಸನ ಪ್ರದರ್ಶಿಸಿದರು.
2015ರಿಂದೀಚೆಗೆ ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಆಸನ ಪ್ರದರ್ಶಿಸಿ, ಎಲ್ಲರೂ ಯೋಗ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಶಾಂತಿ, ಸಾಮರಸ್ಯ ಮತ್ತು ಪ್ರಗತಿಗಾಗಿ ಯೋಗ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ವಿಶ್ವಾದ್ಯಂತ ಯೋಗ ದಿನದಲ್ಲಿ ಪಾಲ್ಗೊಂಡ ಎಲ್ಲರಿಗೂ ಮೋದಿ ಟ್ವೀಟ್ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.