ರಾಷ್ಟ್ರೀಯ ಶಿಕ್ಷಣ ಕರಡು ನೀತಿಯಲ್ಲಿನ ಬದಲಾವಣೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ

ಮಂಗಳೂರು: ಭಾರತ ಸರಕಾರದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಬಿಡುಗಡೆಗೊಳಿಸಿರುವ ಹೊಸ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯ ಬದಲಾವಣೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಪಾಪ್ಯುಲರ್ ಫ್ರಂಟಿನ ಕೇಂದ್ರ ಸೆಕ್ರೆಟರಿಯೇಟ್ ನ ಸಭೆಯಲ್ಲಿ, ಈ ಕರಡು ನೀತಿಯು ಕೇವಲ ಶ್ರೀಮಂತರ ಹಾಗೂ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿರುವ ಶಿಕ್ಷಣದ ರೂಪುರೇಷೆಯಾಗಿದೆ ಎಂದು ಅಭಿಪ್ರಾಯಿಸಿದೆ.
ಕರಡಿನಲ್ಲಿರುವ ಕೆಲವೊಂದು ಹೊಸ ಸುಧಾರಣೆಗಳ ಶಿಫಾರಸ್ಸುಗಳು ವಿದ್ಯಾರ್ಥಿಗಳಿಗೆ ಹೊರೆಯಾಗುವಂತಿದೆ ಮತ್ತು ಇನ್ನು ಕೆಲವು ಶಿಫಾರಸ್ಸುಗಳು ಸರಕಾರವು ಶಿಕ್ಷಣ ಕೇಂದ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಇರಾದೆಯನ್ನು ಸೂಚಿಸುತ್ತಿದೆ ಎಂದು ಸಭೆಯು ಅಭಿಪ್ರಾಯಪಟ್ಟಿತು. 9ನೇ ತರಗತಿಯಿಂದ 12ನೇ ತರಗತಿಯ ವರೆಗೆ ಸದ್ಯಕ್ಕಿರುವ ವಾರ್ಷಿಕ ಪರೀಕ್ಷೆಯಿಂದ 8 ಸೆಮೆಸ್ಟರ್ ಪದ್ಧತಿಯ ಮೂಲಕ ಪರೀಕ್ಷೆ ನಡೆಸುವ ಶಿಫಾರಸ್ಸಿನ ಪರಿಣಾಮವು ಕಳವಳಕಾರಿಯಾಗಿದೆ. ಇದನ್ನು ಜಾರಿಗೊಳಿಸಲು ಕಲಿಕಾ ಅವಧಿಯು ಬಹಳ ಕಡಿಮೆ ಇದೆ ಮಾತ್ರವಲ್ಲ ಇದೀಗಾಗಲೇ ಹಲವಾರು ಶಾಲೆಗಳು ನುರಿತ ಶಿಕ್ಷಕರ ಕೊರತೆಯ ಸಮಸ್ಯೆಯಿಂದ ಬಳಲುತ್ತಿದೆ. ಇದನ್ನು ಪರಿಹರಿಸದೆ ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸುತ್ತದೆ.
ಕರಡು ನೀತಿಯಲ್ಲಿನ 'ರಾಷ್ಟ್ರೀಯ ಶಿಕ್ಷಾ ಆಯೋಗ'ದ ರಚನೆಯ ಪ್ರಸ್ತಾಪವು ಶಿಕ್ಷಣವನ್ನು ಆಯೋಗವು ತನ್ನ ಪರಮಾಧಿಕಾರದಿಂದ ಆಳುವ ಕೇಂದ್ರವಾಗುತ್ತದೆ. ಈ ಆಯೋಗವನ್ನು ಶೈಕ್ಷಣಿಕ ಹಿತಾಸಕ್ತಿಗಿಂತಲೂ ರಾಜಕೀಯ ಹಿತಾಸಕ್ತಿಗಳೇ ಮುಖ್ಯವಾಗಿರುವ ಮಂದಿಗಳು ನಿಯಂತ್ರಿಸುತ್ತಿರುತ್ತಾರೆ. ಆಯೋಗದಲ್ಲಿ ಕೇವಲ 50 ಶೇಕಡಾ ಸದಸ್ಯರು ಮಾತ್ರ ತಮ್ಮ ಅರ್ಹತೆಗನುಸಾರವಾಗಿ ಆಯ್ಕೆಗೊಂಡರೆ ಇನ್ನುಳಿದ ಅರ್ಧದಷ್ಟು ಸದಸ್ಯರನ್ನು ಕೇಂದ್ರ ಸರಕಾರದ ಕ್ಯಾಬಿನೆಟ್ ನೇಮಕಗೊಳಿಸುತ್ತದೆ. ಸಮಿತಿಯ 50 ಶೇಕಡಾ ಸದಸ್ಯರನ್ನು ಸರಕಾರವೇ ನೇಮಿಸುವ ಪ್ರಸ್ತಾಪವು ಸಮಿತಿಯು ಸಂಪೂರ್ಣವಾಗಿ ಆಳುವ ವರ್ಗದ ರಾಜಕೀಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸಬೇಕೆಂಬ ಯೋಜನೆಯ ಭಾಗವಾಗಿರುವುದರ ಸ್ಪಷ್ಟ ನಿದರ್ಶನವಾಗಿದೆ.
ಅದೇ ರೀತಿ ಹಿಂದಿ ಭಾಷೆಯನ್ನು ಮೂರನೇ ಕಡ್ಡಾಯ ಭಾಷೆಯನ್ನಾಗಿ ಹೇರುವುದು ಕೂಡಾ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಮಾತನಾಡುವುದಿಲ್ಲ. ಎಲ್ಲಾ ಭಾಷಿಕರ ಮೇಲೆ ಹಿಂದಿ ಹೇರಿಕೆಯು ಭಾರತದ ವಿವಿಧ ಭಾಷೆಗಳ ಹಾಗೂ ಸಂಸ್ಕೃತಿಯ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಸ್ವಾಯತ್ತ ಹಾಗೂ ಖಾಸಗಿ ವಲಯಕ್ಕೆ ನೀಡಲಾಗಿರುವ ಉದಾರವಾದ ರಿಯಾಯಿತಿಗಳು, ಸರಕಾರವು ಶಿಕ್ಷಣ ವಲಯದ ಅಭಿವೃದ್ಧಿಯಿಂದ ವಿಮುಖರಾಗಿ ಶಿಕ್ಷಣದ ಖಾಸಗೀಕರಣಕ್ಕೆ ಉತ್ತೇಜನ ನೀಡುವ ಒಳಸಂಚಿನ ಸ್ಪಷ್ಟ ನಿದರ್ಶನವಾಗಿದೆ. ಅಂತಹಾ ಕಾಲೇಜುಗಳು ತಮ್ಮ ಪ್ರವೇಶ ಶುಲ್ಕ, ಕೋರ್ಸ್ ಹಾಗೂ ಪಠ್ಯಕ್ರಮಗಳನ್ನು ತಾವೇ ನಿರ್ಧರಿಸುವ ಸ್ವಾತಂತ್ರ್ಯವನ್ನು ಪಡೆದುಕೊಳ್ಳುತ್ತದೆ. ಶಿಕ್ಷಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸುವ ನೆಪದಲ್ಲಿನ ಈ ರೀತಿಯ ಸುಧಾರಣೆಗಳು ಸರಕಾರೀ ಶಿಕ್ಷಣ ಸಂಸ್ಥೆಗಳ ಶಕ್ತಿಗುಂದುವಿಕೆಗೆ ಹಾಗೂ ಖಾಸಗಿ ಖಾಸಗಿ ಸಂಸ್ಥೆಗಳ ಭರಾಟೆಗೆ ಕಾರಣವಾಗುತ್ತದೆ. ಅಂತಿಮವಾಗಿ ಇದು ಬಡ ವರ್ಗಗಳನ್ನು ಶಿಕ್ಷಣದಿಂದ ದೂರವಾಗಿಸುತ್ತದೆ. ಈ ಕರಡು ನೀತಿಯು ಶಿಕ್ಷಣದ ಗುಣಮಟ್ಟ ಮತ್ತು ಅರ್ಹತೆಯನ್ನು ತಾದಾತ್ಮ್ಯಕವಾಗಿ ಚರ್ಚಿಸುತ್ತದೆಯಾದರೂ, ಇದು ಬಡ ಹಾಗೂ ಹಿಂದುಳಿದ ವಿಭಾಗಗಳಿಗೆ ಸಾಂವಿಧಾನಿಕವಾಗಿ ಕಡ್ಡಾಯವಾದ ಮೀಸಲಾತಿಯನ್ನು ನಿರ್ಲಕ್ಷಿಸಿದೆ. 'ಮಿಷನ್ ನಳಂದ' ಮತ್ತು 'ಮಿಷನ್ ತಕ್ಷಶಿಲಾ' ಎಂಬ ಕಲ್ಪನೆಯು ಶಿಕ್ಷಣದ ವೈಜ್ಞಾನಿಕ ನಿಲುವಿಗಿಂತಲೂ ಅವಿವೇಕತನದಿಂದ ಕೂಡಿದ ಪ್ರಾಚೀನತೆಯ ಪರಿಕಲ್ಪನೆಗೆ ಒತ್ತು ನೀಡಿದಂತಿದೆ. ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಸಂಪ್ರದಾಯದ ಆಧಾರದ ಮೇಲೆ ಉನ್ನತ ಶಿಕ್ಷಣ ಮಾದರಿಯನ್ನು ಪುನರ್ ರಚಿಸುವ ಈ ಪ್ರಯತ್ನವು ಶಿಕ್ಷಣವನ್ನು ಕೇಸರೀಕರಣಗೊಳಿಸುವ ಪ್ರತಿಗಾಮಿ ಪ್ರಯತ್ನದ ಭಾಗವಾಗಿದೆ.
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಆಡಳಿತ ವರ್ಗವು ರಾಜಕೀಯಮಯಗೊಳಿಸುವ, ವ್ಯಾಪಾರೀಕರಣಗೊಳಿಸುವ ಮತ್ತು ಕೇಸರೀಕರಣ ಗೊಳಿಸುವ ಪ್ರಯತ್ನಗಳನ್ನು ಎಲ್ಲಾ ರಾಜಕೀಯ ಪಕ್ಷಗಳು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ವಿರೋಧಿಸಬೇಕೆಂದು ಪಾಪ್ಯುಲರ್ ಫ್ರಂಟಿನ ಸೆಕ್ರೆಟರಿಯೇಟ್ ಕರೆ ಕೊಟ್ಟಿದೆ.
ಸಂಚಾಲಕ ಇ ಅಬೂಬಕ್ಕರ್ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ ಮುಹಮ್ಮದಲಿ ಜಿನ್ನಾ, ಉಪಸಂಚಾಲಕ ಒ ಎಂ ಎ ಸಲಾಂಸಲಾಂ, ಕಾರ್ಯದರ್ಶಿಗಳಾದ ವಾಹಿದ್ ಸೇಠ್, ಅನೀಸ್ ಅಹ್ಮದ್, ಇ ಎಂ ಅಬ್ದುಲ್ ರಹಿಮಾನ್ ಮತ್ತು ಕೆ ಎಂ ಶರೀಫ್ ಹಾಜರಿದ್ದರು.







