ಮೂಲರಪಟ್ಣ ಸೇತುವೆ ಕಾಮಗಾರಿ ಆರಂಭವಾಗದಿರಲು ಕ್ಷೇತ್ರದ ಶಾಸಕರೇ ಕಾರಣ:ಬೇಬಿ ಕುಂದರ್ ಆರೋಪ

ಬಂಟ್ವಾಳ, ಜೂ. 21: ಜನತೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮೂಲರಪಟ್ಣ ಸೇತುವೆ ಕಾಮಗಾರಿ ಇನ್ನೂ ಆರಂಭವಾಗದಿರಲು ಕ್ಷೇತ್ರದ ಶಾಸಕರೇ ಕಾರಣ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ.
ಬಹುಪ್ರದೇಶಗಳ ಜನತೆಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮೂಲರಪಟ್ಣ ಸೇತುವೆ ಕಳೆದ ಮಳೆಗಾಲ ಆರಂಭದಲ್ಲಿ ಕುಸಿದು ಬಿದ್ದು ವರ್ಷ ಒಂದು ಕಳೆದರೂ ಇನ್ನೂ ಕಾಮಗಾರಿ ಆರಂಭವಾಗದಿರುವುದು ದುರಂತ. ಸಂಪರ್ಕ ಸೇತುವೆ ಇಲ್ಲದೆ ಇಕ್ಕೆಲಗಳ ಜನರು ಸಂಕಷ್ಟ ಕ್ಕೀಡಾಗಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಕುಂದರ್ ಅವರು ಪತ್ರಿಕಾ ಪ್ರಕಟನೆಯಲ್ಲಿ ದೂರಿದ್ದಾರೆ.
ಸೇತುವೆಯ ಮರುಜೋಡಣೆ ಇಲ್ಲವೇ ಹೊಸ ಸೇತುವೆ ನಿರ್ಮಾಣಕ್ಕೆ ಜನತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ರೀತಿಯಲ್ಲಿ ಸ್ಪಂದಿಸದೇ ಜನತೆಯ ಬೇಡಿಕೆಯನ್ನು ಕಡೆಗಣಿಸಿದ್ದಾರೆ. ಜನತೆಯ ಮೂಲಭೂತ ಅವಶ್ಯಕತೆಯಾದ ಸಂಪರ್ಕ ವ್ಯವಸ್ಥೆಯ ಬಗ್ಗೆಯೇ ಕಿಂಚಿತ್ತೂ ಗಮನ ನೀಡದ ಶಾಸಕರ ಇಚ್ಚಾಶಕ್ತಿಯನ್ನು ಇದೀಗ ಜನರೇ ಪ್ರಶ್ನಿಸುವಂತಾಗಿದೆ ಎಂದು ಬೇಬಿ ಕುಂದರ್ ಟೀಕಿಸಿದ್ದಾರೆ.





