ಕುಖ್ಯಾತ ಕಳ್ಳನ ಬಂಧನ: 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು ಜಪ್ತಿ
ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ

ಚಿಕ್ಕಮಗಳೂರು, ಜೂ.21: ರಾಜ್ಯದ ವಿವಿಧೆಡೆ 58 ಕಳ್ಳತನ ಕೃತ್ಯಗಳನ್ನು ಎಸಗಿದ್ದ ಕುಖ್ಯಾತ ಕಳ್ಳನೊಬ್ಬ ಪ್ರಕರಣವೊಂದರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದು, ಅಲ್ಪಾವಧಿಯಲ್ಲಿ ಮತ್ತೆ 17 ಕಳ್ಳತನ ಕೃತ್ಯ ಎಸಗಿದ್ದ ಪ್ರಕರಣವೊಂದನ್ನು ಜಿಲ್ಲೆಯ ಕಡೂರು ಠಾಣೆಯ ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಶುಕ್ರವಾರ ನಗರದ ಎಸ್ಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ದಾಸಯ್ಯನಗುತ್ತಿ ಗ್ರಾಮದ ನಿವಾಸಿ ಮುಹಮ್ಮದ್ ಖಾಲಿದ್(35) ಬಂಧಿತ ಕುಖ್ಯಾತ ಕಳ್ಳನಾಗಿದ್ದು, ಆರೋಪಿಯನ್ನು ಕಡೂರು ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಕಡೂರು ಪೊಲೀಸರು ಇತ್ತೀಚೆಗೆ ವಶಕ್ಕೆ ಪಡೆದು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ಆರೋಪಿಯಿಂದ 23 ಲಕ್ಷ 83 ಸಾವಿರ ರೂ. ಮೌಲ್ಯದ 701 ಗ್ರಾಂ ಚಿನ್ನದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಕಾರೊಂದನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಕೆಲವು ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಕಳ್ಳತನ ಕೃತ್ಯಗಳಲ್ಲಿ ಸಾಮ್ಯತೆ ಇದ್ದುದರಿಂದ ಓರ್ವ ಕಳ್ಳ ಅಥವಾ ಕಳ್ಳರ ಒಂದೇ ಗುಂಪು ಈ ಕೃತ್ಯ ಎಸಗಿರುವ ಸುಳಿವು ಸಿಕ್ಕಿತ್ತು. ಕಡೂರು ತಾಲೂಕಿನ ಕೆಲವೆಡೆ ನಡೆದ ಕಳ್ಳತನ ಕೃತ್ಯಗಳ ಬೆನ್ನೆತ್ತಿದ್ದ ಪೊಲೀಸರು ಖಚಿತ ಸುಳಿವಿನ ಮೇರೆಗೆ ಇತ್ತೀಚೆಗೆ ಆರೋಪಿಯನ್ನು ಬಂಧಿಸಿದ್ದಾರೆಂದು ಎಸ್ಪಿ ತಿಳಿಸಿದರು.
ಆರೋಪಿಯು ಕಳೆದ 7 ತಿಂಗಳುಗಳಲ್ಲಿ 17 ಮನೆಗಳ್ಳತನ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆಂದು ತಿಳಿಸಿದ ಎಸ್ಪಿ ಹರೀಶ್ ಪಾಂಡೆ, ಮುಹಮ್ಮದ್ ಖಾಲಿದ್ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಹಿಂದೆ ಈತನ ಮೇಲೆ 53 ಪ್ರಕರಣಗಳು ರಾಜ್ಯದ ವಿವಿದ ಜಿಲ್ಲಾ ಜಿಲ್ಲೆಗಳಲ್ಲಿ ದಾಖಲಾಗಿದ್ದು, ಈ ಪೈಕಿ ಒಂದು ಪ್ರಕರಣದಲ್ಲಿ ಈತನಿಗೆ 9 ವರ್ಷ ಶಿಕ್ಷೆಯಾಗಿದೆ. ಮೈಸೂರು ಜೈಲಿನಲ್ಲಿ 9 ತಿಂಗಳುಗಳ ಕಾಲ ಶಿಕ್ಷೆ ಸೆರೆಮನೆ ವಾಸ ಅನುಭವಿಸಿದ್ದ ಆರೋಪಿ ಕಳೆದ 7 ತಿಂಗಳುಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದ. 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರೂ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದ ಈತ ಕಳೆದ 7 ತಿಂಗಳುಗಳಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆಸಿದ್ದ ಮನೆಗಳ್ಳತನ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 16 ಮನೆಗಳ್ಳತನ ಮಾಡಿ, ಚಿನ್ನಾಭರಣ ಕದ್ದಿದ್ದಾನೆಂದು ಅವರು ಮಾಹಿತಿ ನೀಡಿದರು.
ಆರೋಪಿಯು ಕಳ್ಳತನ ಕೃತ್ಯಗಳಿಗೆ ಗುಂಪೊಂದನ್ನು ರಚಿಸಿಕೊಂಡಿದ್ದು, ಕಳ್ಳರ ಗುಂಪಿನೊಂದಿಗೆ ಕಳ್ಳತನ ಮಾಡುತ್ತಿದ್ದ, ಈ ಕಳ್ಳರ ಗುಂಪಿನ ಇತರ ಸದಸ್ಯರು ತಲೆಮರೆಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದ ಅವರು, ಆರೋಪಿಯನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ಸಿಪಿಐಗಳಾದ ರಮೇಶ್‍ರಾವ್, ಮಂಜುನಾಥ್, ಪಿಎಸ್ಸೈ ವಿಶ್ವನಾಥ್, ಠಾಣಾ ಸಿಬ್ಬಂದಿಯಾದ ಕೃಷ್ಣಮೂರ್ತಿ, ಮಲ್ಲಪ್ಪ, ಮಧುಕುಮಾರ್, ಚಿದಾನಂದ, ರಾಜಪ್ಪ, ಮಂಜುನಾಥ್ ನಾಯ್ಕ್, ಹರಿಪ್ರಸಾದ್, ರಂಗಸ್ವಾಮಿ, ಚಂದ್ರಶೇಖರ್, ಮಾರುತಿ, ವಿಜಯ್‍ಕುಮಾರ್ ಸ್ವಾಮಿ ಭಾಗವಹಿಸಿದ್ದರೆಂದು ಮಾಹಿತಿ ನೀಡಿದರು.
ಬಿಜೆಪಿ ಮುಖಂಡ ಅನ್ವರ್ ಕೊಲೆ ಪ್ರಕರಣದ ತನಿಖೆಗೆ ಒತ್ತಾಯಿಸಿ ಶನಿವಾರ ಅನ್ವರ್ ಕುಟುಂಬಸ್ಥರು ಧರಣಿ ಹಮ್ಮಿಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಪ್ರಾಮಾಣಿಕ ತನಿಖೆ ಕೈಗೊಂಡಿದೆ. ಪೊಲೀಸರು ಈ ಪ್ರಕರಣವನ್ನು ನಿರ್ಲಕ್ಷ್ಯಿಸಲು ಕಾರಣಗಳೇ ಇಲ್ಲ. ತನಿಖೆ ಪ್ರಗತಿಯಲ್ಲಿದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ.
- ಹರೀಶ್ ಪಾಂಡೆ, ಎಸ್ಪಿಚಿಕ್ಕಮಗಳೂರು ನಾಗರದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ, ವಾಹನಗಳ ಧಟ್ಟಣೆ ಸಮಸ್ಯೆ ತೀವ್ರವಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಗರದ ಐಜಿ ರಸ್ತೆಯಲ್ಲಿ ರಸ್ತೆ ವಿಭಜಕಗಳ ಅವಳವಡಿಕೆಗೆ ನಗರಸಭೆಗೆ ಕೋರಲಾಗಿದೆ. ವಾಹನಗಳ ಪಾರ್ಕಿಂಗ್ ಕಲ್ಪಿಸಲು ಹಳೇ ಜೈಲು ಆವರಣದಲ್ಲಿ ಕೆಎಸ್ಸಾರ್ಟಿಸಿ ಡಿಸಿಗೆ ಮನವಿ ಸ್ಥಳಾವಕಾಶಕ್ಕೆ ಮನವಿ ಮಾಡಲಾಗಿದೆ. ನಗರದಲ್ಲಿ ಟಿಪ್ಪರ್ ವಾಹನಗಳ ಸಂಚಾರದಿಂದಾಗಿ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ದೂರುಗಳಿವೆ. ಟಿಪ್ಪರ್ ಮಾಲಕರ ಸಭೆ ಕರೆದು ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಈ ಸಂಬಂಧ ಕ್ರಮಗೈಗೊಳ್ಳಲಾಗುವುದು.
- ಹರೀಶ್ ಪಾಂಡೆ, ಎಸ್ಪಿ






.jpg)
.jpg)
.jpg)


