ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ: ಬೇಡಿಕೆಗಳ ಈಡೇರಿಕೆಗೆ ಸಿಎಂಗೆ ದಲಿತರ ಮನವಿ

ಚಂಡರಕಿ, ಜೂ.21: ಮುಖ್ಯಮಂತ್ರಿ ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ಮುಖ್ಯಮಂತ್ರಿಯ ಪ್ರಮುಖ ಕಾರ್ಯಕ್ರಮವಾದ ಗ್ರಾಮ ವಾಸ್ತವ್ಯದ ಭಾಗವಾಗಿ ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಾಮಾಜಿಕ ಸಾಮರಸ್ಯ ಯೋಜನೆ, ಉತ್ತಮ ಶಿಕ್ಷಣ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯಾದ್ಯಂತ ಅಸ್ಪೃಶ್ಯತಾ ನಿವಾರಣೆಗಾಗಿ ಹಾಗೂ ಸಮಾಜದ ಪರಿವರ್ತನೆಗಾಗಿ ಸಾಮಾಜಿಕ ಸಾಮರಸ್ಯ ಯೋಜನೆ ಜಾರಿ ಮಾಡಬೇಕು. ದಲಿತ, ಹಿಂದುಳಿದ ವರ್ಗಗಳಿಗೆ ಬದುಕಿನ ಆಶ್ರಯಕ್ಕಾಗಿ ಭೂಮಿ ನೀಡುವ ಕಾರ್ಯಕ್ರಮ ಜಾರಿಗೊಳಿಸಬೇಕು. ಬಗರ್‌ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಚೀಟಿ ಹಾಗೂ ಹಕ್ಕುಪತ್ರ ನೀಡಬೇಕು. ಅರಣ್ಯ ಸಂಪನ್ಮೂಲದ ಮೇಲಿನ ಹಕ್ಕು ಒದಗಿಸಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ರಚಿಸಬೇಕು.
ರಾಜ್ಯದ ಎಲ್ಲೆಡೆ ಗಂಗಾ ಕಲ್ಯಾಣ ಯೋಜನೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು. ಹೋಬಳಿಗೆ ಒಂದರಂತೆ ಇಂಗ್ಲಿಷ್ ಮಾಧ್ಯಮದಲ್ಲಿ ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಪಠ್ಯಕ್ರಮದೊಂದಿಗೆ ಡಾ.ಅಂಬೇಡ್ಕರ್ ಆಂಗ್ಲ ಮಾಧ್ಯಮ ವಸತಿ ಶಾಲೆಯನ್ನು ಎಲ್‌ಕೆಜಿಯಿಂದ ಆರಂಭ ಮಾಡಬೇಕು. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ನೌಕರರ ಹಿತ ಕಾಯಲು ಕ್ರಮ ಕೈಗೊಳ್ಳಬೇಕು. ಶೀಘ್ರವಾಗಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಸ್ಸಿಯಿಂದ ಬೌದ್ಧ ಧರ್ಮಕ್ಕೆ ಮತಾಂತರವಾದವರಿಗೆ ಎಸ್ಸಿ ಮೀಸಲಾತಿ ಸೌಲಭ್ಯ ವಿಸ್ತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗೆ ವಿವರಿಸಿದರು.







