ಸರಕಾರದ ಅನುದಾನಗಳು ಸರ್ಮಪಕವಾಗಿ ಬಳಕೆಯಾಗಲಿ: ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ

ಬೆಂಗಳೂರು, ಜೂ.21: ಸರಕಾರದಿಂದ ನೀಡುವ ಅನುದಾನಗಳು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಇಲ್ಲದಿದ್ದರೆ, ಎಲ್ಲರಿಗೂ ಉತ್ತಮವಾದ ಆರೋಗ್ಯ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ನಗರದ ಕಿದ್ವಾಯಿಯಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಆಯೋಜಿಸಿದ್ದ ಮಕ್ಕಳಲ್ಲಿ ಕ್ಯಾನ್ಸರ್ ಕುರಿತ ಉಪನ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಬಂದ ನಂತರ ಅನೇಕ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಹಲವು ಕಡೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಅನುದಾನ ಕೊರತೆಯಿಲ್ಲ. ಆದರೆ, ಅನುದಾನ ಸರಿಯಾದ ಪ್ರಮಾಣದಲ್ಲಿ ಬಳಕೆಯಾಗಬೇಕು. ಸಿಗುವ ಅನುದಾನ ಸರಿಯಾದ ಹಾಗೂ ಅರ್ಹರ ಕೈಗೆ ಸಿಕ್ಕಾಗ ಅದು ಸಮರ್ಪಕವಾಗಿ ಸದುಪಯೋಗವಾಗಲು ಸಾಧ್ಯವಾಗುತ್ತದೆ. ಹಣ ಉಪಯೋಗವಾದಾಗಲೇ ಎಲ್ಲರಿಗೂ ಮುಕ್ತವಾದ ಹಾಗೂ ನ್ಯಾಯಯುತವಾದ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಾರಾಯಣ ಹೃದಯಾಲಯದ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಸುನೀಲ್ ಭಟ್ ಮಾತನಾಡಿ, ಕಾನ್ಸರ್ ಎಂಬುದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ವಾರ್ಷಿಕವಾಗಿ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತದೆ. ಇದು ಒಂದು ಪಿಡುಗಿನಂತಿದ್ದು, ಕ್ಯಾನ್ಸರ್ ಬರುವ ಮೊದಲೇ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಕ್ಯಾನ್ಸರ್ ಗುಣಪಡಿಸಲು ಹಲವಾರು ವಿಧಾನಗಳಿದ್ದು, ಬಹಳಷ್ಟು ಕ್ಯಾನ್ಸರ್ ಚಿಕಿತ್ಸೆಗಳಿವೆ. ಆದರೆ, ಕೆಲವು ಕ್ಯಾನ್ಸರ್‌ಗಳಿಗೆ ಇನ್ನೂ ಸರಿಯಾದ ಔಷಧಗಳು ಲಭ್ಯವಾಗಿಲ್ಲ. ಅಲ್ಲದೆ, ರೋಗಿಗಳು ಕ್ಯಾನ್ಸರ್ ಕುರಿತು ನಿರ್ಲಕ್ಷ್ಯ ಮಾಡುವುದರಿಂದ ಗುಣವಾಗುವ ಔಷಧಗಳಿದ್ದರೂ, ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಕ್ಯಾನ್ಸರ್ ಬಗ್ಗೆ ಕೂಡಲೇ ಜಾಗೃತಗೊಳ್ಳಬೇಕು. ನಾವು ಯಾವ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇವೆ ಎಂಬುದನ್ನು ದೃಢೀಕರಿಸಿಕೊಳ್ಳುವುದು ಸೂಕ್ತ ಎಂದರು.
ಭಾರತದಲ್ಲಿ ಮಕ್ಕಳ ಕ್ಯಾನ್ಸರ್ ಹರಡುವುದರಲ್ಲಿ ಕಡಿಮೆಯೇನಿಲ್ಲ. ಶೇ.2 ರಿಂದ 10 ರಷ್ಟು ಮಕ್ಕಳಲ್ಲಿ ಕ್ಯಾನ್ಸರ್ ಬರುತ್ತಿದೆ. ಇದಕ್ಕೆ ದೋಷಪೂರಿತ ಜೀನ್‌ಗಳು ಹಾಗೂ ಪರಿಸರ ಕಾರಣ ಎನ್ನಲಾಗುತ್ತಿದೆ. ಆದರೆ, ಮಕ್ಕಳ ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲ ಹಾಗೂ ಇದು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುವುದಿಲ್ಲ ಎಂದು ಹೇಳಿದರು.
ಇತ್ತೀಚಿನ ದಶಕಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಧಿಕ ಪ್ರಗತಿ ಸಾಧಿಸಿದ್ದು, ಇದರಿಂದಾಗಿ ಕ್ಯಾನ್ಸರ್‌ಗೆ ತುತ್ತಾದ ಬಹುತೇಕ ಮಕ್ಕಳು ಗುಣಮುಖರಾಗಿದ್ದಾರೆ. ಕ್ಯಾನ್ಸರ್‌ಗೆ ತುತ್ತಾದ ಮಕ್ಕಳ ಪೈಕಿ ಹಲವಾರು ಮಕ್ಕಳು ಐದಾರು ವರ್ಷ ಬದುಕಿದರೆ, ಕೆಲವು ಮಕ್ಕಳು ದೀರ್ಘಕಾಲ ಜೀವಿಸುತ್ತಾರೆ. ಹೆಚ್ಚು ಕಾಲ ಚಿಕಿತ್ಸೆ ಪಡೆದಷ್ಟೂ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಕಡಿಮೆಯಿರುತ್ತದೆ. ಐದು ವರ್ಷದ ಬಳಿಕ ಮತ್ತೆ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ ಎಂದರು. ಕಾರ್ಯಕ್ರಮದಲ್ಲಿ ಕಿದ್ವಾಯಿಯ ಅಧ್ಯಕ್ಷ ಸಿ.ರಾಮಚಂದ್ರ ಸೇರಿದಂತೆ ಹಲವರಿದ್ದರು.







