ತುಂಬಿದ ಬಜೆ ಅಣೆಕಟ್ಟು: ನಾಳೆಯಿಂದ ನಗರಕ್ಕೆ ಪ್ರತಿದಿನ ನೀರು

ಉಡುಪಿ, ಜೂ.21: ಹಿರಿಯಡ್ಕ ಸಮೀಪದ ಸ್ವರ್ಣ ನದಿಯ ಬಜೆ ಅಣೆಕಟ್ಟಿಗೆ ಸಾಕಷ್ಟು ನೀರು ಹರಿದು ಬರುತ್ತಿರುವುದರಿಂದ ಜೂ.23ರಿಂದ ನಗರಕ್ಕೆ ಪ್ರತಿದಿನ ನೀರು ಸರಬರಾಜು ಮಾಡಲು ಉಡುಪಿ ನಗರಸಭೆ ನಿರ್ಧರಿಸಿದೆ.
4.90 ಮೀಟರ್ ಎತ್ತರದ ಬಜೆ ಅಣೆಕಟ್ಟು ಜೂ.20ರಂದು ರಾತ್ರಿ ವೇಳೆ ತುಂಬಿದ್ದು, ಇದೀಗ ನೀರು ಓವರ್ ಫ್ಲೋ ಆಗಿ ಹರಿಯುತ್ತಿದೆ. ಅದೇ ರೀತಿ ಅಲ್ಲೇ ಸಮೀಪದ ಆರು ಮೀಟರ್ ಎತ್ತರದ ಕಿರು ಜಲ ವಿದ್ಯುತ್ ಉತ್ಪಾದನಾ ಘಟಕದ ಅಣೆಕಟ್ಟು ಕೂಡ ತುಂಬಿ ಹರಿಯುತ್ತಿದೆ.
ಈ ಎರಡು ಅಣೆಕಟ್ಟುಗಳು ಕೂಡ ತುಂಬಿ ಹರಿಯುತ್ತಿರುವುದರಿಂದ ಕುಡಿ ಯುವ ನೀರಿನ ಶುದ್ದೀಕರಣ ಘಟಕದಿಂದ ನಿರಂತರವಾಗಿ ಪಂಪಿಂಗ್ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರು ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದ್ದ ನೀರಿನ ರೇಶನಿಂಗ್‌ನ್ನು ಹಂತ ಹಂತವಾಗಿ ನಿಲ್ಲಿಸಲಾಗುತ್ತಿದೆ.
ಜೂ.23ರ ರವಿವಾರದಿಂದ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ನೀರು ಸರಬರಾಜು ಮಾಡಲಾಗುವುದು. ಈಗ ಚಾಲ್ತಿಯಲ್ಲಿರುವಂತೆ ದಿನಕ್ಕೆ ಐದಾರು ಗಂಟೆಗಳ ನೀರು ನೀಡಲಾಗುತ್ತದೆ. ಸದ್ಯ ದಿನದ 24ಗಂಟೆಗಳ ನೀರು ನೀಡಲು ಸಾಧ್ಯವಿಲ್ಲ ಎಂದು ಉಡುಪಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.





