ಕಲಾಕೃತಿಗಳಿಂದ ದೇಶದ ಸಂಸ್ಕೃತಿ ಅರಿಯಲು ಸಾಧ್ಯ: ನಟಿ ಪದ್ಮಜಾ ರಾವ್
ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ

ಬೆಂಗಳೂರು, ಜೂ.21: ದೇಶದ ವಿವಿಧ ರಾಜ್ಯಗಳ ಚಿತ್ರಕಲಾಕೃತಿಗಳಿಂದ ದೇಶದ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ನಟಿ ಪದ್ಮಜಾ ರಾವ್ ತಿಳಿಸಿದರು.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನ ಆವರಣದಲ್ಲಿ ಚಿತ್ತಾರ ಸಹಯೋಗದಲ್ಲಿ ಗ್ರಾಂಡ್ ಫ್ಲಿಯಾ ಆಯೋಜಿಸಿದ ದಿ ಸೋಕ್ (ಮಾರ್ಕೆಟ್) ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ರಾಜ್ಯದ ಕಲೆಯನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುತ್ತಾಡುವ ಮೂಲಕ ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳುವ ಹಾಗೂ ಆಯಾ ಪ್ರಾಂತ್ಯದ ಕಲೆಯನ್ನು ನೋಡುವ ಅವಕಾಶ ಇಲ್ಲಿದೆ ಎಂದರು.
ಕಾರ್ಯಕ್ರಮದ ಸಂಚಾಲಕರಾದ ಅಫ್ತಾಬ್ ಮಾತನಾಡಿ, ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ. ಇಂತಹ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಜೂ. 21 ರಿಂದ ಜೂನ್ 30ರ ವರೆಗೆ ನಗರದ ಕರ್ನಾಟಕ ಚಿತ್ತಕಲಾ ಪರಿಷತ್‌ನ ಆವರಣದಲ್ಲಿ ದಿ ಸೋಕ್ ಮಾರ್ಕೆಟ್ ಎನ್ನುವ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದಿ ಸೋಕ್ ಮಾರ್ಕೆಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ ಎಂದು ಹೇಳಿದರು.







