ವಿವಿಗಳು ಪ್ರಾಧ್ಯಾಪಕರಿಲ್ಲದೆ ಶೋಚನೀಯ ಸ್ಥಿತಿಯಲ್ಲಿವೆ: ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ವಾಲಿಕರ್
ಬೆಂಗಳೂರು, ಜೂ.21: ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ಪ್ರಾಧ್ಯಾಪಕರಿಲ್ಲದೆ ಶೋಚನೀಯ ಸ್ಥಿತಿ ತಲುಪಿದೆ. ಈ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಸರಕಾರದ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಚ್.ಬಿ.ವಾಲಿಕರ್ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಸಂಶೋಧನಾ ವಿದ್ಯಾರ್ಥಿಗಳ ವತಿಯಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎಂ.ಎಸ್.ಮಹದೇವ ನಾಯ್ಕಾಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯದ ಮಟ್ಟ ಹೆಚ್ಚಾಗಬೇಕು. ಆದರೆ, ರಾಜ್ಯದ ಯಾವುದೆ ವಿಶ್ವವಿದ್ಯಾಲಯದಲ್ಲಿ ಸೂಕ್ತವಾದ ಪ್ರಾಧ್ಯಾಪಕರಿಲ್ಲದೆ ಸೊರಗುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯದಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಈ ಬಗ್ಗೆ ಧ್ವನಿ ಎತ್ತಬೇಕಾದವರೆ ವೌನವಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂದು ಅವರು ಹೇಳಿದರು.
ನಾನು ಒಂದು ವಿಶ್ವವಿದ್ಯಾಲಯದ ಕುಲಪತಿಯಾಗಿ ನನ್ನ ಅನುಭವ ಹೇಳುವುದಾದರೆ, ಪ್ರಭುತ್ವದ ಜೊತೆಗೆ ಘರ್ಷಣೆ ಮಾಡುವುದಕ್ಕಿಂತ ಅವಮಾನವನ್ನು ಸಹಿಸಿಕೊಂಡಾದರು ಪ್ರಭುತ್ವದ ಅಡಿಯಾಳಾಗಿ ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕುಲಪತಿಗಳು ಮುಂದಾಗಬೇಕು ಎಂದು ಅವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎಂ.ಎಸ್.ಮಹದೇವ ನಾಯ್ಕಾಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಈ ವೇಳೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಕೆಂಪರಾಜು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಗಣಿತ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಬಾಕ್ಸ್
ವಿವಿಗಳ ಸ್ಥಿತಿ ಹೇಳತೀರದಾಗಿದೆ
ವಿಶ್ವವಿದ್ಯಾಲಯಗಳ ಕುಲಪತಿಗಳ ಸ್ಥಿತಿ ಆಯ್ಯೋ ಅಪ್ಪಾ ಎನ್ನುವಂತಾಗಿದೆ. ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಏನೇ ಕೆಲಸ ಮಾಡಿಸಿಕೊಳ್ಳಬೇಕಾದರು ಪ್ರಭುತ್ವದ ಜತೆಗೆ ಭಾಗಿಯಾಗಬೇಕು ಇಲ್ಲವೆ ಅಡಿಯಾಳಾಗಿರಬೇಕು. ಇವೆರಡೂ ಆಗದಿದ್ದರೆ ಸಂಘರ್ಷ ಹಾಗೂ ಘರ್ಷಣೆ ಮಾಡುವ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕಾಗುತ್ತದೆ.
-ಎಚ್.ಬಿ.ವಾಲಿಕರ್, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ







