ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ರೈತಸಂಘ ಧರಣಿ

ಮಂಡ್ಯ, ಜೂ.21: ಕೆಆರ್‍ಎಸ್, ಹೇಮಾವತಿ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಶುಕ್ರವಾರ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದರು.
ಕೆಆರ್‍ಎಸ್ ಜಲಾಶಯದಲ್ಲಿ 80 ಅಡಿ ನೀರಿದ್ದು, ನಾಲೆಗಳಿಗೆ ಒಂದು ಕಟ್ಟು ನೀರು ಹರಿಸುವ ಮೂಲಕ ಬೆಳೆಗಳನ್ನು ರಕ್ಷಿಸಬೇಕು ಹಾಗೂ ಜನಜಾನುವಾರುಗಳ ಕುಡಿಯುವ ನೀರು ಸಮಸ್ಯೆ ನೀಗಿಸಬೇಕು ಎಂದರು.
ಜಿಲ್ಲೆಯ ಸುಮಾರು 34 ಸಾವಿರ ಹೆಕ್ಟೇರ್ ನಲ್ಲಿ ಕಬ್ಬು ಬೆಳೆದಿದ್ದು, ಒಣಗುತ್ತಿದೆ. ಒಂದು ವೇಳೆ ನೀರು ಹರಿಸದಿದ್ದರೆ ಸಾಕಷ್ಟು ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮೈಷುಗರ್, ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಹೊಸ ಮೈಷುಗರ್ ಆರಂಭದ ಪ್ರಕ್ರಿಯೆ ನಡದೇ ಇಲ್ಲ. ಆದ್ದರಿಂದ ಕೂಡಲೇ ಎರಡೂ ಕಾರ್ಖಾನೆಗಳನ್ನು ಆರಂಭಿಸಿ ಕಬ್ಬು ನುರಿಸಬೇಕು ಎಂದು ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ಹಲವು ತಿಂಗಳಿಂದ ಕಬ್ಬಿನ ಬಾಕಿ ಪಾವತಿಸದೆ ಸತಾಯಿಸುತ್ತಿವೆ. ಸರಕಾರ ಮಧ್ಯಪ್ರವೇಶ ಮಾಡಿ ಕೂಡಲೇ ಕಬ್ಬಿನ ಬಾಕಿ ಪಾವತಿಗೆ ಕ್ರಮವಹಿಸಬೇಕು. ಭತ್ತ ಖರೀದಿ ಕೇಂದ್ರ ತೆರೆಯಯಬೇಕು ಎಂದು ಆಗ್ರಹಿಸಿದರು.
ಸಾಲಮನ್ನಾ ಯೋಜನೆ ಚುರುಕುಗೊಳಿಸಿ ರೈತರಿಗೆ ಸಾಲ ನೀಡುವಂತೆ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸೂಚಿಸಬೇಕು. ತಾಲೂಕು ಕಚೇರಿಗಳಲ್ಲಿ ಲಂಚಾವತಾರಕ್ಕೆ ಕಡಿವಾಣ ಹಾಕಬೇಕು. ಸಕಾಲದಲ್ಲಿ ರೈತರ ಕೆಲಸ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ದರ್ಶನ್ ಪುಟ್ಟಣ್ಣಯ್ಯ, ರಾಮಕೃಷ್ಣಯ್ಯ, ಕೆಂಪೂಗೌಡ, ಶಂಭೂನಹಳ್ಳಿ ಸುರೇಶ್, ಬಿ.ಬೊಮ್ಮೇಗೌಡ, ಗೋವಿಂದೇಗೌಡ, ಪಿ.ಕೆ.ನಾಗಣ್ಣ, ಲತಾ ಶಂಕರ್, ಜಿ.ಎ.ಶಂಕರ್, ರಮೇಶ್ ಇತರರು ಭಾಗವಹಿಸಿದ್ದರು.
ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಎಚ್.ಬಿ.ರಾಮು, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ, ಇತರ ಸಂಘಟನೆಗಳ ಮುಖಂಡರು ಧರಣಿಗೆ ಸಾಥ್ ನೀಡಿದರು.







