ಬಾಬರಿ ಎಕ್ಸ್ ಪೋ : ಅಥಾವುಲ್ಲಾ ಜೋಕಟ್ಟೆ ವಿರುದ್ಧ ಕೇಸಿಗೆ ಹೈಕೋರ್ಟ್ ತಡೆಯಾಜ್ಞೆ
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶಾದ್ಯಂತ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಿದ್ದ "ಬಾಬರಿ ಮಸ್ಜಿದ್ ಮರಳಿ ಪಡೆಯೋಣ ದೇಶವನ್ನು ಮರಳಿ ಗಳಿಸೋಣ" ಎಂಬ ಅಭಿಯಾನದ ಪ್ರಯುಕ್ತ ಎಸ್ ಡಿ ಪಿ ಐ ಪಕ್ಷವು ದ.ಕ. ಜಿಲ್ಲಾದ್ಯಂತ ಅಭಿಯಾನವನ್ನು ನಡೆಸಿತ್ತು.
ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಉಳ್ಳಾಲ ದಲ್ಲಿ ಬಾಬರಿ ಎಕ್ಸ್'ಪೋ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮ ನಡೆದ ನಂತರದ ದಿನಗಳಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರ ಮೇಲೆ ಜಾಮೀನು ರಹಿತ ಕೇಸನ್ನು ದಾಖಲಿಸಿದ್ದರು. ಇದೊಂದು ರಾಜಕೀಯ ಪ್ರೇರಿತ ಕೇಸು ಎಂದು ಸಾರ್ವಜನಿಕರು ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಉಳ್ಳಾಲ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಪ್ರಕರಣ ಕೈಬಿಡಲು ಆಗ್ರಹಿಸಿ ಪ್ರತಿಭಟನೆಯೂ ನಡೆದಿತ್ತು.
ಈ ಬಗ್ಗೆ ಎಸ್ ಡಿ ಪಿ ಐ ಕಾನೂನು ತಂಡವು ರಾಜ್ಯ ಹೈ ಕೋರ್ಟ್ ನಲ್ಲಿ ಕಾನೂನು ಹೋರಾಟವನ್ನು ನಡೆಸಿ ಜೂ. 20 ರಂದು ಜಿಲ್ಲಾಧ್ಯಕ್ಷರ ಮೇಲಿನ ಪ್ರಕರಣಕ್ಕೆ ತಡೆಯಾಜ್ಞೆ ತಂದಿದೆ. ಈ ಪ್ರಕರಣದಲ್ಲಿ ಹೈಕೋರ್ಟು ವಕೀಲರಾದ ಲತೀಫ್ ಬಡಗನ್ನೂರು ವಾದ ಮಂಡಿಸಿದ್ದರು.





