ಉಡುಪಿ: ಕನ್ನಡ ಮಾಧ್ಯಮ ಶಾಲೆಗಳಿಗೆ 5ಲಕ್ಷ ರೂ. ಮೊತ್ತದ ಪುಸ್ತಕ, ಸಮವಸ್ತ್ರ, ಆರ್ಥಿಕ ನೆರವು ವಿತರಣೆ

ಉಡುಪಿ, ಜೂ.22: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ವತಿಯಿಂದ ಉಡುಪಿ ಜಿಲ್ಲೆಯ ಆಯ್ದ ಕನ್ನಡ ಮಾಧ್ಯಮ ಶಾಲೆಗಳಿಗೆ ನೋಟ್ ಪುಸ್ತಕ, ಸಮವಸ್ತ್ರ ಹಾಗೂ ವಿದ್ಯಾರ್ಜನೆಗಾಗಿ ಆರ್ಥಿಕ ನೆರವು ವಿತರಣಾ ಸಮಾರಂಭವು ಶನಿವಾರ ಸಂಘದ ಜಗನ್ನಾಥ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಮಾತನಾಡಿ, ಸರಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಲು ಇಂದು ಸಾಕಷ್ಟು ಮಂದಿ ದಾನಿಗಳು ಮುಂದೆ ಬರುತ್ತಿದ್ದಾರೆ. ಪಾಠ ಹೇಳುವ ಉತ್ತಮ ಶಿಕ್ಷಕರಿದ್ದಾರೆ. ಆದರೆ ಕಲಿಯಲು ಮಕ್ಕಳು ಮಾತ್ರ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಮಾಜ ಮಾಡಬೇಕು ಎಂದರು.
ಕೇವಲ ಸರಕಾರದಿಂದ ಮಾತ್ರ ಯಾವುದೇ ಒಂದು ಪ್ರದೇಶ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ. ಅದರ ಜೊತೆ ಖಾಸಗಿ ಸಂಸ್ಥೆಗಳು ಕೂಡ ಕೈಜೋಡಿಸಬೇಕು. ಖಾಸಗಿ ಸಂಸ್ಥೆಗಳು ತಮ್ಮ ಲಾಭದ ಒಂದು ಭಾಗವನ್ನು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ತಿಳಿಸಿದರು.
10 ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 3 ಲಕ್ಷ ಮೊತ್ತದ ನೋಟ್ ಪುಸ್ತಕ, ಮೂರು ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೊತ್ತದ ಶಾಲಾ ಸಮವಸ್ತ್ರ ಹಾಗೂ ನಾಲ್ವರು ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ಮೊ್ತದ ಆರ್ಥಿಕ ನೆರವು ನೀಡಲಾಯತು.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಎಲ್. ಉಮಾನಾಥ್, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ವಿನಯ ಕುಮಾರ್ ಟಿ.ಎ., ಜಯಾನಂದ ಮೈಂದನ್, ಪದ್ಮನಾಭ ನಾಯಕ್, ಜಾರ್ಜ್ ಸ್ಯಾಮ್ಯವೆಲ್, ಸದಾಶಿವ ನಾಯಕ್, ರಘುರಾಮ ಶೆಟ್ಟಿ, ಅಬ್ದುಲ್ ರಝಾಕ್, ಜಯ ಶೆಟ್ಟಿ, ಗಾಯತ್ರಿ ಎಸ್.ಭಟ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಂದಿಸಿದರು. ಶಾಖಾ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.







