ಮಳೆಯಿಂದ ಸಿಎಂ ‘ಗ್ರಾಮ ವಾಸ್ತವ್ಯ’ ಮುಂದೂಡಿಕೆ

ಯಾದಗಿರಿ, ಜೂ. 22: ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಹೇರೂರು(ಬಿ) ಗ್ರಾಮದಲ್ಲಿಂದು ನಡೆಯಬೇಕಿದ್ದ ಸಿಎಂ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜಿಲ್ಲಾಧಿಕಾರಿ ವೆಂಕಟೇಶ ಅವರೊಂದಿಗೆ ನಿನ್ನೆ ಮಧ್ಯರಾತ್ರಿಯವರೆಗೂ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚಿಸಿ ಅಂತಿಮವಾಗಿ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು.
ಇದು ಒಂದೆಡೆ ತೀವ್ರ ನಿರಾಶೆ ಉಂಟು ಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಮಳೆಯಾಗಿರುವದರಿಂದ ರೈತರ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲ ಆಗಲಿದೆ ಎಂಬ ಸಮಾಧಾನವಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡ್ರಕಿಯಲ್ಲಿಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜುಲೈ ತಿಂಗಳಲ್ಲಿ ವಿಧಾನ ಮಂಡಲದ ಅಧಿವೇಶನದ ದಿನಾಂಕ ನೋಡಿಕೊಂಡು ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿ ಅತ್ಯಂತ ಯಶಸ್ವಿಯಾಗಿ ಜನತಾ ದರ್ಶನ ಮತ್ತು ಗ್ರಾಮ ವಾಸ್ತವ್ಯ ನಡೆದಿರುವುದು ತನಗೆ ಸಂತಸ ತಂದಿದೆ ಎಂದ ಅವರು, ಇದಕ್ಕೆ ಸಹಕರಿಸಿದ ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಧನ್ಯವಾದಗಳು ಎಂದು ತಿಳಿಸಿದರು.
ಸಿಎಂ ಕುಮಾರಸ್ವಾಮಿ ಶನಿವಾರ ಬೆಳಗ್ಗೆ 6 ಗಂಟೆಗೆ ಎದ್ದು ದಿನ ನಿತ್ಯದ ಕ್ರಿಯಾಕರ್ಮಗಳನ್ನು ಪೂರ್ಣಗೊಳಿಸಿ ಸಚಿವರೊಂದಿಗೆ ಬಿಸಿಯಾದ ಕಾಫಿ ಸೇವಿಸಿದರು. ನಂತರ ಪತ್ರಿಕೆಗಳನ್ನು ಓದಿದರು. ಈ ವೇಳೆ ಸಚಿವರಾದ ಬಂಡೆಪ್ಪ ಕಾಶೆಂಪೂರ, ವೆಂಕಟರಾವ ನಾಡಗೌಡ, ಸಾ.ರಾ.ಮಹೇಶ, ಶಾಸಕ ನಾಗನಗೌಡ ಕಂದಕೂರ ಹಾಜರಿದ್ದರು.
‘ಇಂದು ಬೆಳಗ್ಗೆ ನಾನು ಎದ್ದಾಗ ಚಂಡರಕಿಯಲ್ಲಿ ಮಳೆಯಾಗಿದ್ದು ನೋಡಿ ಸಂತೋಷವಾಯಿತು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಜಿಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಸ್ಥಳೀಯ ಸಮಸ್ಯೆಗಳನ್ನು ಹಾಗೂ ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಗಳನ್ನು ಆದ್ಯತೆ ಮೇಲೆ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ’
-ಕುಮಾರಸ್ವಾಮಿ ಮುಖ್ಯಮಂತ್ರಿ(ಟ್ವೀಟ್)







