ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಕೌನ್ಸಿಲ್‌ನಿಂದ ತರಬೇತಿ ಶಿಬಿರ

ಮಂಗಳೂರು, ಜೂ.22: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಕೌನ್ಸಿಲ್‌ನ ದ.ಕ ಜಿಲ್ಲಾ ಘಟಕದ ವತಿಯಿಂದ ಮಸ್ಜಿದ್ ಒನ್ ಮೂವ್‌ಮೆಂಟ್‌ನ ಅಂಗವಾಗಿ ನಗರದ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ಇತ್ತೀಚೆಗೆ ಜಿಲ್ಲೆಯ ಆಯ್ದ ಕೆಲವು ಮಸೀದಿಗಳ ಪ್ರತಿನಿಧಿಗಳಿಗೆ ತರಬೇತಿ ಶಿಬಿರ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮುಹಮ್ಮದ್ ಇಮ್ತಿಯಾಝ್ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿಯು ಬಹಳ ಚಿಂತಾಜನಕವಾಗಿದೆ. ಅವರು ಎಲ್ಲಾ ಸ್ತರಗಳಲ್ಲೂ ಹಿಂದುಳಿದಿದ್ದಾರೆ. ಆ ಕಾರಣಕ್ಕಾಗಿಯೇ ಎಐಎಂಡಿಸಿ ಭಾರತದಾದ್ಯಂತ ಮಸ್ಜಿದ್‌ಗಳನ್ನು ಕೇಂದ್ರವಾಗಿಸಿಕೊಂಡು ಮುಸ್ಲಿಮರ ಸ್ಥಿತಿಗಳನ್ನು ಸುಧಾರಿಸಲು ಮಸ್ಜಿದ್ ಒನ್ ಮೂವ್‌ಮೆಂಟ್ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದರು.
ಮಸ್ಜಿದ್ ಎಂಬುದು ಸಮುದಾಯದ ಅಭಿವೃದ್ಧಿ ಕೇಂದ್ರವಾಗಬೇಕು. ಮಸೀದಿ, ಮುಅಲ್ಲಿಮರು, ಜಮಾಅತ್‌ಗೊಳಪಟ್ಟ ಎಲ್ಲಾ ಮುಸ್ಲಿಮರ ಮಾಹಿತಿ ಸಂಗ್ರಹಿಸಿ ಆ ಮೂಲಕ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟವನ್ನು ಉನ್ನತಿಗೇರಿಸಿ ಸಬಲರನ್ನಾಗಿಸುವುದು ಮತ್ತು ಸರಕಾರದ ಎಲ್ಲಾ ಸೌಲಭ್ಯಗಳು ಮಸ್ಜಿದ್‌ಗಳ ಮೂಲಕ ಪಡೆಯುವಂತಾಗಬೇಕು ಇದುವೇ ಇದರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಮುಹಮ್ಮದ್ ಇಮ್ತಿಯಾಝ್ ನುಡಿದರು.
ಸರಕಾರಿ ಸೌಲಭ್ಯಗಳ ಕುರಿತ ಮಾಹಿತಿಯನ್ನು ಅಲ್ಪಸಂಖ್ಯಾತ ಇಲಾಖೆಯ ಅಬ್ದುಲ್ ಖಾದರ್ ನಾವೂರ ನೀಡಿದರು. ಜಮಾಅತ್ ಸದಸ್ಯರ ಜವಾಬ್ದಾರಿಗಳ ಬಗ್ಗೆ ರಫೀಕ್ ಮಾಸ್ಟರ್ ಮಾಹಿತಿ ನೀಡಿದರು. ಅತಿಥಿಗಳಾಗಿ ಭಾರತ್ ಕನ್ಸ್‌ಸಟ್ಕೆಕ್ಷನ್‌ನ ಮುಸ್ತಫಾ ಭಾಗವಹಿಸಿದ್ದರು.
ಎಐಎಂಡಿಸಿ ಜಿಲ್ಲಾಧ್ಯಕ್ಷ ಅಹ್ಮದ್ ಮುಹಿಯುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಹುಸೈನ್ ನೂರ್ ಉಪಸ್ಥಿತರಿದ್ದರು. ಹಬೀಬ್ ಖಾದರ್ ವಂದಿಸಿದರು.








