ಬಂಟ್ವಾಳ: ಆಧಾರ್ ಕಾರ್ಡಿಗೆ ಮುಂಗಡ ಟೋಕನ್ ಪಡೆಯಲು ಕಾದು ಸುಸ್ತಾದ ಸಾರ್ವಜನಿಕರು

ಬಂಟ್ವಾಳ, ಜೂ. 22: ಆಧಾರ್ ಕಾರ್ಡಿಗೆ ಮುಂಗಡ ಟೋಕನ್ ಪಡೆಯಲು ಬಿ.ಸಿ.ರೋಡಿನ ಎಸ್‍ಬಿಐ ಬ್ಯಾಂಕ್ ಮುಂಭಾಗ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಯುತ್ತಿದ್ದ ದೃಶ್ಯ ಕಂಡು ಬಂತು.
ಆಧಾರ್ ಕಾರ್ಡ್ ಪಡೆಯಲು ಹಾಗೂ ಆಧಾರ್ ತಿದ್ದುಪಡಿ ಮಾಡುವ ಉದ್ದೇಶದಿಂದ ಟೋಕನ್ ನೀಡುವುದಾಗಿ ಹೇಳಿದ್ದರಿಂದ ಮುಂಜಾನೆಯಿಂದಲೇ ಬ್ಯಾಂಕ್ ಮುಂಭಾಗ ಜನ ಸರತಿಯಲ್ಲಿ ಕಾಯಲಾರಂಭಿಸಿದ್ದರು.
ಟೋಕನ್ ಪಡೆಯಲು ಜನ ಬೆಳಗ್ಗಿನಿಂದಲೇ ಕಾಯುತ್ತಿದ್ದರೂ ಶನಿವಾರ ಬೆಳಿಗ್ಗೆ 10 ಗಂಟೆಯವರೆಗೂ ಟೋಕನ್ ವಿತರಣೆ ಆರಂಭವಾಗಿರಲಿಲ್ಲ. ಬ್ಯಾಂಕಿನ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದರು. ಬೆಳಿಗ್ಗೆ ಬೇಗ ಹೋದರೆ ಟೋಕನ್ ಪಡೆದು ಮತ್ತೆ ಕೆಲಸಕ್ಕೆ ಹೋಗಬಹುದು ಎಂದು ಕೊಂಡು ಅನೇಕ ಮಂದಿ ಬೆಳಿಗ್ಗೆ 6 ಗಂಟೆಯಿಂದಲೇ ಸರತಿಯಲ್ಲಿ ಕಾಯಲಾರಂಭಿಸಿದ್ದಾರೆ. ಒಂಭತ್ತು ಗಂಟೆಯ ವೇಳೆಗೆ ಸರತಿ ಸಾಲು ಕೋರ್ಟ್ ಗೇಟ್‍ವರೆರೆಗೂ ಬೆಳಯಲಾರಂಭಿಸಿತು. ಮಕ್ಕಳನ್ನು ಹಿಡಿದು ಕೊಂಡ ಮಹಿಳೆಯರು, ವೃದ್ಧರು ತೊಂದರೆ ಪಡುವಂತಾಯಿತು.
ಮಾಧ್ಯಮ ಪ್ರತಿನಿಧಿಗಳು ಈ ವಿಚಾರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸಂಬಂಧಪಟ್ಟವರಿಗೆ ತಕ್ಷಣ ಟೋಕನ್ ವಿತರಿಸಲು ಅವರು ಸೂಚಿಸಿದ್ದು, ಬಳಿಕ ಹೊರ ಭಾಗದಲ್ಲಿಯೇ ಟೋಕನ್ ವಿತರಿಸಲಾಯಿತು.
ಬಂಟ್ಬಾಳ ತಾಲೂಕಿನಲ್ಲಿ 5 ಕಡೆಗಳಲ್ಲಿ ಮಾತ್ರ ಆಧಾರ್ ಟೋಕನ್ ನೀಡುವ ಕೇಂದ್ರಗಳಿದ್ದು, ತಾಲೂಕಿನ ಲಕ್ಷಾಂತರ ಮಂದಿ ಈ ಕೇಂದ್ರಗಳನ್ನು ಆಶ್ರಯಿಸಬೇಕಿರುವುದರಿಂದ ತೊಂದರೆ ಪಡುವಂತಾಗಿದೆ. ಪ್ರತಿಭಾರಿಯೂ ಬ್ಯಾಂಕಿನ ಮುಂದೆ ಸಾರ್ವಜನಿಕರು ಕಾಯುವ ಪರಿಸ್ಥಿತಿ ಇದು, ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
ಪ್ರಭಾಕರ ದೈವಗುಡ್ಡೆ, ಸಾಮಾಜಿಕ ಕಾರ್ಯಕರ್ತ
ಆಧಾರ್ ಕಾರ್ಡ್ ನೋಂದಾಣಿ ಹಾಗೂ ವಿತರಣೆಯ ಬಗ್ಗೆ ಈಗಲೂ ಸಮಸ್ಯೆಗಳಿದ್ದು, ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬೃಹತ್ ಆಧಾರ್ ಅದಾಲತ್ ಮಾಡಲಾಗುವುದು.
ರಶ್ಮಿ ಎಸ್.ಆರ್., ತಹಶೀಲ್ದಾರ್, ಬಂಟ್ವಾಳ







