ಅಭಿವೃದ್ಧಿ ಹೆಸರಲ್ಲಿ ಮಾನವೀಯ ಮೌಲ್ಯ ಮರೆಯಾಗಬಾರದು: ಬಿ.ಎಸ್.ಯಡಿಯೂರಪ್ಪ
ರಕ್ಷಾ ಫೌಂಡೇಶನ್‌ನಿಂದ 10 ಸಾವಿರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಉಚಿತ ಪುಸ್ತಕ ವಿತರಣೆ

ಬೆಂಗಳೂರು,ಜೂ 22: ದೇಶದ ಅಭಿವೃದ್ಧಿ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ಮರೆಯಾಗಬಾರದು. ಪ್ರತಿಯೊಂದು ಕಾರ್ಯಯೋಜನೆಗಳ ಆಶಯ ಮಾನವೀಯ ಮೌಲ್ಯವೇ ಆಗಿರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಶನಿವಾರ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್‌ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ 10ಸಾವಿರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಉಚಿತ ಪುಸ್ತಕಗಳು, ಮತ್ತಿತರ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ. ನಮ್ಮಲ್ಲಿರುವ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಸಮಾಜದ ಅಭಿವೃದ್ಧಿಗೆ ಬಳಕೆಯಾದಾಗ ಮಾತ್ರ ಅದಕ್ಕೆ ಬೆಲೆ, ನೆಲೆ ದೊರೆಯುತ್ತದೆ ಎಂದರು.
ಜೀವನದಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣದಿಂದ ಮಾತ್ರ ಪರಿಹಾರ. ನಾವು ನೀಡುವ ಶಿಕ್ಷಣ ವ್ಯಕ್ತಿಯ ಭವಿಷ್ಯ ರೂಪಿಸುವ ಜತೆಗೆ, ಸಮಾಜಕ್ಕೆ ಬೇಕಾದ ವ್ಯಕ್ತಿಯನ್ನೂ ಸಹ ನಿರ್ಮಾಣ ಮಾಡುವಂತಾಗಬೇಕು. ಸಮಾಜಕ್ಕೆ ಪೂರಕವಲ್ಲದ ವ್ಯಕ್ತಿಗಳಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಣವನ್ನು ಅಂಕಗಳಿಂದ ಅಳೆಯುವುದಲ್ಲ. ಸಮಾಜಕ್ಕಾಗಿ ಬದುಕುವಂತಹ ವಿನಯವಂತಿಕೆಯನ್ನು, ಸೌಜನ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿದಾಗ ಮಾತ್ರ ಶಿಕ್ಷಣ ಮತ್ತು ಬದುಕಿಗೆ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಮಾತನಾಡಿ, ನಾನು ಹತ್ತನೇ ತರಗತಿವರೆಗೆ ಕನ್ನಡದಲ್ಲೇ ಕಲಿತೆ. ಪಿಯುಸಿಯಲ್ಲಿ ಇಂಗ್ಲಿಷ್ ಮಾಧ್ಯಮ ಸೇರಿದ ನಂತರ ಇಂಗ್ಲಿಷ್ ಕಷ್ಟವಾಗುತ್ತಿತ್ತು. ಬಳಿಕ ನನ್ನ ಅಮ್ಮನ ಸೂಚನೆಯಂತೆ ನಿರಂತರ ಪ್ರಯತ್ನದ ಫಲವಾಗಿ ಎಂಜಿನಿಯರಿಂಗ್‌ನಲ್ಲಿ ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದೆ ಎಂದರು. ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರಿಗೆ ಗೌರವನೀಡಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಜಾತಿ, ಮತ, ಪಂಥಗಳನ್ನು ದಾಟಿ ವಿದ್ಯಾರ್ಥಿ ಸಮುದಾಯ ಮುನ್ನಡೆಯಬೇಕು. ದೃಢವಾಧ ಮನಸ್ಸಿದ್ದರೆ, ಸದೃಢವಾದ ದೇಶಕಟ್ಟಲು ಸಾಧ್ಯ ಎಂದು ಡಾ.ಸುಧಾಮೂರ್ತಿ ಹೇಳಿದರು.
ರಕ್ಷಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಮಾತನಾಡಿದರು. ಸಮಾರಂಭದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದ ತೇಜಸ್ವಿ ಸೂರ್ಯ, ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನೂರಾಧಾ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಬಾಕ್ಸ್
ಉತ್ತಮ ಶಿಕ್ಷಣ ಉತ್ತಮ ಪುಸ್ತಕಗಳಿಂದ ಬರುವುದಿಲ್ಲ. ಉತ್ತಮ ಬೋಧನೆಯಿಂದಲೂ ಸಿಗುವುದಿಲ್ಲ. ಉತ್ತಮರಾಗಬೇಕು ಎನ್ನುವ ತುಡಿತ ನಮ್ಮ ಮನಸ್ಸಿನಲ್ಲಿರಬೇಕು. ಮನಸ್ಸು ಎನ್ನುವುದು ಕುದುರೆ ಇದ್ದಂತೆ, ಅದಕ್ಕೆ ಲಗಾಮು ಹಾಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ನಿರಂತರ ಬರವಣಿಗೆ, ಓದಿನಿಂದ ಯಶಸ್ಸು ಸಾಧಿಸಲು ಸಾಧ್ಯ.
-ಸುಧಾಮೂರ್ತಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ









