ಡಬಲ್ ಹಣದ ಆಮಿಷ ಒಡ್ಡಿ ನೂರಾರು ಮಂದಿಗೆ ವಂಚನೆ: ಮಹಿಳೆಯ ಬಂಧನ
ಐಎಂಎ ವಂಚನೆ ಬೆನ್ನಲ್ಲೇ ಮತ್ತೊಂದು ಪ್ರಕರಣ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಜೂ.22: ಬೆಂಗಳೂರಿನ ಐಎಂಎ ವಂಚನೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಂತಹದ್ದೇ ವಂಚನೆ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಬಿಟ್ ಕಾಯಿನ್ ಮತ್ತು ಐಕಾಯಿನ್ ಹೆಸರಿನಲ್ಲಿ ಈ ವ್ಯವಹಾರ ನಡೆದಿದ್ದು, ಹೂಡಿದ ಹಣವನ್ನು ಎರಡು, ಮೂರು ಪಟ್ಟು ಹೆಚ್ಚಿಸಿಕೊಡುವುದಾಗಿ ಹೇಳಿ ನೂರಾರು ಜನರಿಂದ ಹಣ ಪಡೆದು ಕೋಟ್ಯಾಂತರ ರೂ. ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ನಗರದ ಪೆನ್ಶನ್ ಮೊಹಲ್ಲಾ ಬಡಾವಣೆಯ ರುಕ್ಷಿಂದ ಬಾನು ಎಂಬ ಮಹಿಳೆ ಹಾಗೂ ಇನ್ನೋರ್ವ ವ್ಯಕ್ತಿ ಈ ಪ್ರಕರಣದ ಪ್ರಮುಖ ರೂವಾರಿಗಳಾಗಿದ್ದು, ಈಗ ಪೊಲೀಸರ ವಶದಲ್ಲಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಕಂಪನಿ ಆರಂಭಿಸಿದ ಈ ಇಬ್ಬರು ತಮ್ಮಲ್ಲಿ ಹೂಡಿಕೆ ಮಾಡಿದ ಹಣವನ್ನು ಎರಡು ಪಟ್ಟು ಹೆಚ್ಚುಗೊಳಿಸಿ ಮೂರು ಕಂತುಗಳಲ್ಲಿ ಹಿಂತಿರುಗಿಸುವುದಾಗಿ ಆಸೆ ಹುಟ್ಟಿಸಿದ್ದರು. ಇದಕ್ಕೆ ಮಾರು ಹೋದ ನಗರದ ವಿಜಯಪುರ, ಪೆನ್ಶನ್ ಮೊಹಲ್ಲ, ಶರೀಫ್ ಗಲ್ಲಿ ಇನ್ನಿತರ ಬಡಾವಣೆಗಳ ನೂರಾರು ಮಂದಿ 10 ಸಾವಿರ ರೂ.ಗಳಿಂದ ಹತ್ತಾರು ಲಕ್ಷ ರೂ. ವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಕೆಲವು ಗ್ರಾಹಕರಿಗೆ ಹೇಳಿದಂತೆ ಮೂರು ಕಂತುಗಳಲ್ಲಿ ಅವರ ಹಣಕ್ಕೆ ಮೂರು ಪಟ್ಟು ಹೆಚ್ಚಿಗೆ ಹಣ ನೀಡಿ ನಂಬಿಕೆ ಹುಟ್ಟಿಸಿ, ನೀವು ಇನ್ನೂ ನಾಲ್ಕು ಜನರನ್ನು ಕರೆತಂದರೆ ಕಮಿಷನ್ ಹಣ ಸಿಗುತ್ತದೆ ಎಂದು ಆಸೆ ತೋರಿಸಿದ್ದಾರೆ. ಇದರಿಂದ ಈ ವಂಚನೆ ಜಾಲಕ್ಕೆ ಸಿಕ್ಕಿಬಿದ್ದವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನಲಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಕಂಪನಿ ಮಾಲಕರಿಬ್ಬರೂ ಪರಾರಿಯಾಗುತ್ತಾರೆ ಎನ್ನುವ ಸಂಶಯಗಳು ಕಾಡಲಾರಂಭಿಸಿದ ಹಿನ್ನೆಲೆಯಲ್ಲಿ ಕೆಲವರು ತಾವು ಹೂಡಿದ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ. ಅವರಿಗೆ ಸಬೂಬು ಹೇಳಿ ಸಾಗಹಾಕಲಾಗಿತ್ತು. ಆದರೆ ಇಂದು ಸಂಜೆ ಕೆಲವರು ವಂಚಕರ ಮನೆಗೆ ತೆರಳಿ ಅವರ ಕಂಪ್ಯೂಟರ್ ನಲ್ಲಿ ತಮಗೆ ನೀಡಲಾಗಿದ್ದ ಐಡಿ ಬಗ್ಗೆ ಪರಿಶೀಲಿಸಿದ್ದು, ಅದರಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ ಎಂಬುದನ್ನು ಅರಿತ ಗ್ರಾಹಕರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ನಗರ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರುಕ್ಷಿಂದ ಬಾನುಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರ ತಿಳಿದ ಕೂಡಲೇ ನಗರ ಠಾಣೆ ಎದುರು ಹಲವಾರು ಮಂದಿ ಜಮಾಯಿಸಿ ತಾವೂ ವಂಚನೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.
ವಿಜಯಪುರದ ಸೈಯದ್ ಎಂಬವರು ಮಾತನಾಡಿ, ಹೆಚ್ಚಿನ ಹಣ ಸಿಗುತ್ತದೆ ಎನ್ನುವ ಆಸೆಗೆ ತಾನು ಸೇರಿದಂತೆ ಕೆಲವರು, 4, 7, 10 ಲಕ್ಷ ರೂ. ಹೀಗೆ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹಣ ನೀಡುವಂತೆ ಕೇಳಿದಾಗಲೆಲ್ಲ ಇಂದು, ನಾಳೆ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಇದೇ ರೀತಿ ದಾದು, ಫಾತಿಮ, ಸೈಯದ್, ರಿಯಾಜ್, ರಫೀಕ್ ಇನ್ನಿತರರು ಸಹ ಹಣ ಕಳೆದುಕೊಂಡಿರುವುದಾಗಿ ತಿಳಿಸಿದರು. ವಂಚಕರಿಬ್ಬರೂ ಈಗ ಪೊಲೀಸರ ವಶದಲ್ಲಿದ್ದು, ತನಿಖೆ ಮುಂದುವರೆದಿದೆ.
ಇಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ. 1 ಕ್ಕೆ 3 ಪಟ್ಟು ಹೆಚ್ಚು ಹಣ ನೀಡುವುದಾಗಿ ಹಣ ಹೂಡಿಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ 30 ಕ್ಕೂ ಹೆಚ್ಚು ಜನ ವಂಚನೆಗೊಳಗಾಗಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ
-ಹರೀಶ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಆರೋಪಿ ರುಕ್ಷಿಂದ ಬಾನು ನಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ಗಳು, 105 ಗ್ರಾಂ. ಬಂಗಾರದ ಒಡವೆ, 53,210 ರೂ. ನಗದು, ಒಂದು ಇಕೋ ಸ್ಪೋರ್ಟ್ಸ್ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಈ ವಂಚನೆ ಪ್ರಕರಣ ಸಂಬಂಧ ಶನಿವಾರ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೂರುಗಳು ಇನ್ನೂ ಬರುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲು ಟೇಬಲ್ ಆರಂಭಿಸಲಾಗಿದೆ. ವಂಚನೆಗೊಳಗಾದವರು ಇಲ್ಲಿ ದೂರು ದಾಖಲಿಸಬಹುದು.
- ಹರೀಶ್ ಪಾಂಡೆ, ಎಸ್ಪಿ







