‘ಉಡುಪಿ ಹೆಲ್ಪ್’ ಆ್ಯಪ್: 10 ದಿನಗಳಲ್ಲಿ 164 ದೂರುಗಳು
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: 720 ಆ್ಯಪ್ ಬಳಕೆದಾರರು

ಉಡುಪಿ, ಜೂ.22: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪ ಹಾಗೂ ವಿವಿಧ ಸಮಸ್ಯೆಗಳ ಕ್ಷಿಪ್ರ ನಿರ್ವ ಹಣೆಗಾಗಿ ಜಿಲ್ಲಾಡಳಿತ ಜಾರಿಗೆ ತಂದಿರುವ ‘ಉಡುಪಿ ಹೆಲ್ಪ್’ ಆ್ಯಪ್‌ಗೆ ಜನ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ್ಯಪ್ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಈ ಆ್ಯಪ್‌ಗೆ ಒಟ್ಟು 164 ದೂರುಗಳು ಬಂದಿವೆ.
ಉಡುಪಿ ನಗರಸಭೆಯ 35 ವಾರ್ಡ್‌ಗಳ ವ್ಯಾಪ್ತಿಯಿಂದ ಜೂ.22ರವರೆಗೆ ಬಂದ ಎಲ್ಲ 164 ದೂರುಗಳಿಗೂ ತಕ್ಷಣವೇ ಸ್ಪಂದಿಸಿ, ಸಮಸ್ಯೆಯನ್ನು ಆರು ಗಂಟೆಯ ಅವಧಿಯೊಳಗೆ ಸರಿಪಡಿಸಲಾಗಿದೆ. ಹೀಗೆ ಪ್ರತಿದಿನ ಸರಾಸರಿ 10-12 ದೂರುಗಳು ಈ ಆ್ಯಪ್‌ನಲ್ಲಿ ದಾಖಲಾಗುತ್ತಿವೆ. ಈವರೆಗೆ ಅತ್ಯಂತ ಹೆಚ್ಚು ದೂರುಗಳು ತೆಂಕಪೇಟೆ ವಾರ್ಡ್‌ನಿಂದ ಬಂದಿವೆ. ಸದ್ಯ 720 ಮಂದಿ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ವಿಶೇಷ ಆಸಕ್ತಿ ಯಿಂದ ಜಾರಿಗೆ ತಂದಿರುವ ಈ ಆ್ಯಪನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಜೂ.11ರಂದು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದ್ದರು. ಆ್ಯಪ್ ಬಿಡುಗಡೆಯಾದ ಒಂದೇ ವಾರದಲ್ಲಿ ಸುಮಾರು 73 ದೂರುಗಳು ದಾಖಲಾಗಿವೆ.
ಉಡುಪಿ ನಗರಸಭೆಯ 35 ವಾರ್ಡ್‌ಗಳಿಗೆ ಸೀಮಿತವಾಗಿರುವ ಈ ಆ್ಯಪ್ ಮೂಲಕ ನಗರದ ಜನತೆ ತಮ್ಮ ವಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ಫೋಟೋ/ವೀಡಿಯೋ ಸಮೇತವಾಗಿ ದಾಖಲು ಮಾಡುತ್ತಿದ್ದಾರೆ. ಈ ದೂರು ಗಳಿಗೆ ಕ್ಷಿಪ್ರವಾಗಿ ಸ್ಪಂದಿಸುತ್ತಿರುವ ನಗರಾಡಳಿತವು, ದೂರಿನ ವಿಲೇವಾರಿಗೆ ನಿಗದಿಪಡಿಸಿರುವ ಗರಿಷ್ಠ 6 ಗಂಟೆಗಳ ಮಿತಿಗಿಂತ ಮುಂಚೆಯೇ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕೆಲವು ದೂರುಗಳಿಗೆ ಒಂದು ಗಂಟೆಯೊಳಗೆ ಪರಿಹಾರ ಒದಗಿಸಲಾಗಿದೆ.
ಈ ಆ್ಯಪ್‌ನಲ್ಲಿ ದೂರುದಾರರು ಸಮಸ್ಯೆಗಳ ಫೋಟೋ ಹಾಕುವುದರಿಂದ ನಗರಾಡಳಿತಕ್ಕೆ ಸಮಸ್ಯೆಯ ಸ್ವರೂಪ ತಕ್ಷಣವೇ ತಿಳಿಯುತ್ತದೆ. ಆದುದರಿಂದ ಅದಕ್ಕೆ ಬೇಕಾದ ಸಿಬ್ಬಂದಿ, ಸಲಕರಣೆಗಳು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಸ್ಥಳಕ್ಕೆ ಭೇಟಿ ನೀಡಲಾಗುತ್ತದೆ. ಇದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುತ್ತಿದೆ. ಸಮಸ್ಯೆ ಪರಿಹಾರವಾದ ನಂತರ ಅದರ ಫೋಟೋ ತೆಗೆದು, ದೂರುದಾರನಿಗೆ ಕಳುಹಿಸಲಾಗುತ್ತಿದೆ.
ಧಾರಾಕಾರ ಮಳೆಯ ಸಮಸ್ಯೆ, ವಿದ್ಯುತ್ ಕಡಿತ, ಮರ ಬಿದ್ದ ಪ್ರಕರಣಗಳು, ವಿದ್ಯುತ್ ಕಂಬ ಬಿದ್ದಿರುವುದು, ಪ್ರವಾಹ, ಚರಂಡಿ, ಚರಂಡಿ ತುಂಬಿ ಅಡಚಣೆ, ಸಿಡಿಲಿನಿಂದ ಹಾನಿ, ಕಟ್ಟಡ ಕುಸಿತ, ಭೂಕುಸಿತ ಮತ್ತಿತರ ಪ್ರಾಕೃತಿಕ ಸಮಸ್ಯೆಗಳ ಬಗ್ಗೆ ಈ ಆ್ಯಪ್ನಲ್ಲಿ ದೂರು ನೀಡಬಹುದಾಗಿದೆ.
ಉಡುಪಿ ನಗರಸಭೆ ಮಾತ್ರವಲ್ಲದೆ ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳು ಆ ಆ್ಯಪ್‌ನಲ್ಲಿನ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಸಾರ್ವಜನಿಕರು ಪ್ಲೆಸ್ಟೋರ್ ನಿಂದ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ಕೊಳ್ಳಬಹುದಾಗಿದೆ ಎಂದು ಆ್ಯಪ್‌ನ ಮೇಲುಸ್ತುವಾರಿಯಾಗಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.
‘ಉಡುಪಿ ಹೆಲ್ಪ್ ಆ್ಯಪ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನಷ್ಟು ಪ್ರತಿಕ್ರಿಯೆ ದೊರೆಯುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ಸದ್ಯ ಉಡುಪಿ ನಗರಸಭೆಯ 35ವಾರ್ಡ್‌ಗಳಿಗೆ ಸೀಮಿತವಾಗಿರುವ ಈ ಆ್ಯಪ್‌ನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’
-ಸಂತೋಷ್ ಕುಮಾರ್, ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ, ಉಡುಪಿ.







