ವಿವಿ ಕುಲಪತಿ-ಶಿಕ್ಷಕರ ನೇಮಕಾತಿಯಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು: ಡಾ.ಎಸ್.ಎನ್.ಹೆಗಡೆ
ಬೆಂಗಳೂರು, ಜೂ.22: ರಾಜ್ಯ ವಿಶ್ವವಿದ್ಯಾನಿಲಯಗಳ ಉಪಕುಲಪತಿ, ಬೋಧಕ ವರ್ಗದ ನೇಮಕಾತಿಯಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ರಾಂತ ಕುಲಪತಿಗಳ ವೇದಿಕೆಯ ಅಧ್ಯಕ್ಷ ಡಾ.ಎಸ್.ಎನ್.ಹೆಗಡೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಲಪತಿಗಳ ನೇಮಕಾತಿ ಕಾಯ್ದೆಯನ್ವಯ ವಿಶ್ವವಿದ್ಯಾಲಯಗಳ ಉಪಕುಲಪತಿ, ಬೋಧಕ ವರ್ಗದ ನೇಮಕಾತಿ ಮತ್ತು ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೊಂದಿದ್ದ ಸ್ವಾಯತತ್ತೆಯನ್ನು ಸರಕಾರ ಮೊಟಕುಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳ ಮೇಲೆ ಸರಕಾರ ಹಸ್ತಕ್ಷೇಪ ಮಾಡುತ್ತಿರುವುದರಿಂದ ವಿವಿಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ವಿಶ್ವವಿದ್ಯಾಲಯಗಳ ಕಾರ್ಯಗಳಿಗೆ ಹೊರಗಿನ ನಿಯಂತ್ರಣ ಅಗತ್ಯವಿಲ್ಲ. ಉನ್ನತ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಾಗಬೇಕಾದರೆ ಸರಕಾರದ ಹಸ್ತಕ್ಷೇಪ ಇರಬಾರದು ಎಂದು ಅವರು ಹೇಳಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ.50ರಷ್ಟು ಬೋಧಕ ವರ್ಗದ ಕೊರತೆಯುಂಟಾಗಿದೆ. ವಿವಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಾಗೂ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ವಿಶ್ರಾಂತ ಉಪಕುಲಪತಿಗಳ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಕೇವಲ ಶಿಕ್ಷಣದಿಂದ ಪಡೆಯುವ ಜ್ಞಾನದಿಂದ ಪ್ರಯೋಜನವಿಲ್ಲ. ವಿದ್ಯಾರ್ಥಿಗಳಿಗೆ ಕೌಶಲ್ಯವಿರಬೇಕು. ಈ ನಿಟ್ಟಿನಲ್ಲಿ ವಿವಿಗಳಿಗೆ ಸ್ವಾಯತ್ತತೆಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪಕುಲಪತಿಗಳಾದ ಪ್ರೊ.ವೆಂಕಟರಾಮಯ್ಯ, ಪ್ರೊ.ಶ್ರೀನಿವಾಸಗೌಡ, ಪ್ರೊ.ಮುನಿಯಮ್ಮ, ಪ್ರೊ.ಚಂದ್ರಶೇಖರ್ ಮತ್ತಿತರರಿದ್ದರು.







