ಕೆಪಿಜೆಪಿ ಯಾವ ಪಕ್ಷದೊಂದಿಗೂ ವಿಲೀನವಾಗಲ್ಲ: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಿ.ಮಹೇಶ್ ಗೌಡ
ಬೆಂಗಳೂರು, ಜೂ.22: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನವಾಗುತ್ತಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಿ.ಮಹೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ರಾಣೆಬೆನ್ನೂರು ಶಾಸಕ ಆರ್.ಶಂಕರ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತೇವೆ ಎಂದು ಪದೆ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ ಯಾವುದೇ ಸಂದರ್ಭದಲ್ಲಿ ನಮ್ಮ ಪಕ್ಷವನ್ನು ಯಾವುದೇ ಪಕ್ಷದೊಂದಿಗೂ ವಿಲೀನಗೊಳಿಸುವುದಿಲ್ಲ. ಶಾಸಕರು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸಲಿ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಆದರೆ ಪಕ್ಷದ ವಿಲೀನ ಮಾತ್ರ ಸಾಧ್ಯವಿಲ್ಲ ಎಂದರು.
ಈ ವಿಚಾರವಾಗಿ ನಮ್ಮ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಸಮಿತಿ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿದ್ದು ಕಾನೂನಾತ್ಮಕವಾಗಿ ಪಕ್ಷದ ವಿಲೀನ ಸಾಧ್ಯವಿಲ್ಲ. ಕೆಪಿಜೆಪಿ ಪಕ್ಷ ಯಾವುದೇ ಪಕ್ಷದೊಂದಿಗೆ ವಿಲೀನವಾಗದೇ ಕಾರ್ಯ ನಿರ್ವಹಿಸಲಿದೆ ಎಂದು ಸ್ಪಷ್ಟನೆ ನೀಡಿದರು.
Next Story





