ಕಾರಿಗೆ ಮೊಟ್ಟೆ ಎಸೆದು ಪತ್ರಕರ್ತೆಗೆ ಗುಂಡಿಕ್ಕಿದ ದುಷ್ಕರ್ಮಿಗಳು

ಹೊಸದಿಲ್ಲಿ, ಜೂ.23: ಪೂರ್ವ ದೆಹಲಿಯ ವಸುಂಧರ ಎನ್‍ಕ್ಲೇವ್ ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪತ್ರಕರ್ತೆಯ ಮೇಲೆ ಮುಸುಕುಧಾರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಮಿಥಾಲಿ ಚಂದೋಲಾ ಎಂಬ ಪತ್ರಕರ್ತೆ ಮಧ್ಯರಾತ್ರಿ 12:30ರ ಬಳಿಕ ಹುಂಡೈ ಕಾರಿನಲ್ಲಿ ನೋಯ್ಡಾದಿಂದ ಹೋಗುತ್ತಿದ್ದಾಗ, ಅವರ ವಾಹನವನ್ನು ಹಿಂದಿಕ್ಕಿದ ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಕಾರಿನಲ್ಲಿದ್ದ ಮುಸುಕುಧಾರಿಗಳು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಮುಂಬದಿಯ ಕಿಟಕಿ ಗಾಜಿಗೆ ಬಡಿದ ಒಂದು ಗುಂಡು ಮಿಥಾಲಿ ಕೈಗೆ ತಾಗಿದೆ. ಕಾರಿನಲ್ಲಿ ದಾಳಿಕೋರರು ಪರಾರಿಯಾಗುವ ಮುನ್ನ ಇವರ ಕಾರಿನ ಮುಂದಿನ ಗಾಜಿನತ್ತ ಮೊಟ್ಟೆ ಎಸೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಧರ್ಮಶಿಲಾ ಆಸ್ಪತ್ರೆಯಲ್ಲಿ ಪತ್ರಕರ್ತೆ ಚಿಕಿತ್ಸೆ ಪಡೆಯುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ದರೋಡೆ ಮಾಡುವ ಸಲುವಾಗಿ ಗಾಜಿಗೆ ಮೊಟ್ಟೆ ಎಸೆಯುವ ಪ್ರಕರಣದಲ್ಲಿ ಯಾವುದೇ ಗುಂಪು ತೊಡಗಿದೆಯೇ ಎಂದು ಪತ್ತೆ ಹಚ್ಚಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ವೈಯಕ್ತಿಕ ದ್ವೇಷ ಕಾರಣವಿರಬಹುದೇ ಎಂಬ ಅಂಶದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಚಂದೋಲಾ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಕುಟುಂಬ ವ್ಯಾಜ್ಯದ ಪ್ರಕರಣವಿರಬಹುದು ಎಂದು ಪೊಲೀಸ್ ಅಧಿಕಾರಿ ಜಸ್ಮೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.







