ಬೆಳೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ: ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರಿ ಸ್ಪಷ್ಟನೆ

ಮಂಡ್ಯ, ಜೂ.23: ಕೇಂದ್ರದ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಇಲ್ಲದೆ ಕೆಆರ್‍ಎಸ್ ಅಣೆಕಟ್ಟೆಯಿಂದ ಬೆಳೆಗಳಿಗೆ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.
ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆಗೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದು, ಕೆಆರ್‍ಎಸ್ ಅಣೆಕಟ್ಟೆ ಕೇಂದ್ರದ ನೀರು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣದಲ್ಲಿರುವುದರಿಂದ ಅನುಮತಿ ಇಲ್ಲದೆ ನೀರು ಬಿಡುಗಡೆ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಾದ್ಯಂತ ಬೆಳೆದು ನಿಂತಿರುವ ಕಬ್ಬು, ಇತರ ಬೆಳೆಗಳು ಮುಂಗಾರು ಮಳೆ ಕೊರತೆಯಿಂದಾಗಿ ಒಣಗುತ್ತಿದ್ದು ನಾಲೆಗಳಲ್ಲಿ ನೀರು ಹರಿಸಿದರೆ ಬೆಳೆಗಳು ಉಳಿದುಕೊಳ್ಳತ್ತವೆ ಎಂದು ಜಿಲ್ಲೆಯ ರೈತರ ಪರವಾಗಿ ತಾನು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಜತೆಗೆ ಮುಂಗಾರು ಮಳೆ ಕಡಿಮೆಯಾಗಿರುವುದರಿಂದ ಅಣೆಕಟ್ಟೆಯಲ್ಲಿರುವ ನೀರನ್ನು ಕುಡಿಯುವ ನೀರಿಗಾಗಿ ಬಳಕೆ ಮಾತ್ರ ಮೀಸಲಿಡುವುದು ಸೂಕ್ತವೆಂದು ಹಾಗೂ ಅಣಿಕಟ್ಟೆಯ ಒಳಹರಿವು ಹೆಚ್ಚಾದಲ್ಲಿ ನಾಲೆಗಳಲ್ಲಿ ನೀರು ಹರಿಸಲು ಚಿಂತಿಸಬಹುದೆಂದು ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆಂದು ಎಂದು ಅವರು ಹೇಳಿದ್ದಾರೆ.
ಕಾರ್ಯದರ್ಶಿಗಳು ತಿಳಿಸಿರುವ ವಿಷಯವನ್ನು ರೈತ ಸಂಘದ ಹೋರಾಟದ ನಾಯಕತ್ವವನ್ನು ಹೊತ್ತಿರುವ ದರ್ಶನ್ ಪುಟ್ಟಣಯ್ಯ ಅವರಿಗೆ ಹಲವು ಬಾರಿ ದೂರವಾಣಿ ಮೂಲಕ ತಿಳಿಸಲಾಗಿದೆ ಎಂದು ಎನ್.ಮಂಜುಶ್ರೀ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.







