ಯುದ್ಧ ನಡೆದರೆ ಇಡೀ ಗಲ್ಫ್ ರಾಷ್ಟ್ರಗಳಿಗೆ ಹರಡಬಹುದು: ಇರಾನ್ ಎಚ್ಚರಿಕೆ
ದುಬೈ/ವಾಶಿಂಗ್ಟನ್, ಜೂ.23: ಕೊಲ್ಲಿ ಪ್ರದೇಶದಲ್ಲಿ ನಡೆಯುವ ಯಾವುದೇ ಸಂಘರ್ಷ ಇಡೀ ಗಲ್ಫ್ ರಾಷ್ಟ್ರಗಳಿಗೆ ಅನಿಯಂತ್ರಿತವಾಗಿ ಹರಡುವ ಸಾಧ್ಯತೆಯಿದೆ ಮತ್ತು ಹೀಗಾದಲ್ಲಿ ಅಗಾಧ ಪ್ರಮಾಣದಲ್ಲಿ ಅಮೆರಿಕ ಸೈನಿಕರು ಸಾವನ್ನಪ್ಪಲಿದ್ದಾರೆ ಎಂದು ಇರಾನ್ ಸೇನಾ ಕಮಾಂಡರ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ವಿರುದ್ಧ ಹೆಚ್ಚಿನ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ. ಯುದ್ಧ ನಡೆದರೆ ಅದರ ಅಗಾಧತೆಯನ್ನು ಯಾವ ದೇಶದಿಂದಲೂ ಸಹಿಸಲು ಸಾಧ್ಯವಿಲ್ಲ ಎಂದು ಇರಾನ್ ಸೇನಾ ಕಮಾಂಡರ್ ಮೇಜರ್ ಜನರಲ್ ಗೊಲಮಲಿ ರಶೀದ್ ತಿಳಿಸಿದ್ದಾರೆ. ಗಲ್ಫ್ ಪ್ರದೇಶದಲ್ಲಿ ಯುದ್ಧ ನಡೆದರೆ ಅಮೆರಿಕದ ಯೋಧರು ದೊಡ್ಡ ಪ್ರಮಾಣದಲ್ಲಿ ಬಲಿಯಾಗಲಿದ್ದಾರೆ. ಹಾಗಾಗಿ ಅಮೆರಿಕ ಇಲ್ಲಿ ಯಾವುದೇ ದುರ್ವರ್ತನೆಗಳನ್ನು ತೋರದೆ ತನ್ನ ಸೈನಿಕರ ಜೀವಗಳನ್ನು ರಕ್ಷಿಸುವಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ತಿಳಿಸಿದ್ದಾರೆ. ಕೊಲ್ಲಿ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ರಾಜಕೀಯವಾಗಿ ಮತ್ತು ಮಾತುಕತೆ ಹಾಗೂ ಉದ್ವಿಗ್ನ ಶಮನಕ್ಕೆ ಆದ್ಯತೆ ನೀಡುವ ಮೂಲಕ ಪರಿಹರಿಸಬಹುದು ಎಂದು ಯುಎಇಯ ಅಧಿಕಾರಿಗಳು ತಿಳಿಸಿದ್ದಾರೆ.