ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿರುವುದೇ ಸಂವಿಧಾನದ ಕಾನೂನುಗಳಿಂದ: ನ್ಯಾ.ನಾಗಮೋಹನ್ ದಾಸ್

ಚಿಕ್ಕಮಗಳೂರು, ಜೂ.27: ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸಂವಿಧಾನ ಅಡಿಪಾಯದ ಮೇಲೆ ನಡೆಯುತ್ತಿದೆ. ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿರುವುದೇ ಸಂವಿಧಾನದ ಕಾನೂನುಗಳಿಂದ. ಇಡೀ ದೇಶದ ಎಲ್ಲ ಸಮುದಾಯಗಳ ಜನರಿಗೂ ಸಂವಿಧಾನವೇ ದೊಡ್ಡ ಧರ್ಮಗ್ರಂಥವಾಗಿದೆ. ಇಂತಹ ಸಂವಿಧಾನದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾವ ಸರಕಾರಗಳೂ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಜನರೂ ಸಂವಿಧಾನವನ್ನು ಅರಿಯುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂದು ಹೈಕೋರ್ಟ್‍ನ ವಿಶ್ರಾಂತ ಮುಖ್ಯ ನಾಯಾಧೀಶ ಎಚ್.ಎನ್.ನಾಗಮೋಹನ್‍ದಾಸ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕಾನೂನು ಸೇವಾಪ್ರಾಧಿಕಾರ, ಪೊಲೀಸ್ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತೀ ಪ್ರಜೆಯೂ ಹುಟ್ಟಿದಾಗಿನಿಂದ ಸಾಯುವವರೆಗೂ ಸಂವಿಧಾನಾತ್ಮಕವಾದ ಕಾನೂನುಗಳ ನಿಯಂತ್ರಣಕ್ಕೊಳಪಟ್ಟಿದ್ದು, ಈ ಕಾನೂನುಗಳ ತಾಯಿ ಸಂವಿಧಾನವಾಗಿದೆ ಎಂದ ಅವರು, ದೇಶದಲ್ಲಿ ಸಂವಿಧಾನದ ಅಡಿಯಲ್ಲೇ ಶೈಕ್ಷಣಿಕ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ, ಆದರೆ ಕಾನೂನಿನ ಸಾಕ್ಷರತೆಯನ್ನು ನೀಡುತ್ತಿಲ್ಲ. ಸಂವಿಧಾನದ ಬಗೆಗಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಎಂದು ನಾಗಮೋಹನ್ ದಾಸ್ ಅಭಿಪ್ರಾಯಿಸಿದರು.
ದೇಶ ಸ್ವಾತಂತ್ರ್ಯಗಳಿಸಿದ ಸಂದರ್ಭದಲ್ಲಿ ದೇಶದ ಸಾಕ್ಷರತೆ ಶೇ.20ರಷ್ಟಿತ್ತು. ಪ್ರಸಕ್ತ ಶೇ.80ರಷ್ಟಿದೆ. ಶೇ.90ರಷ್ಟಿದ್ದ ಬಡತನ ಪ್ರಸಕ್ತ 21ರಷ್ಟಿದೆ. ಅಲ್ಲದೇ ಉದ್ಯೋಗ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವಸತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಕಂಡಿದ್ದು, ಜಾತಿ ವ್ಯವಸ್ಥೆ, ಅಸ್ಪೃಶ್ಯತಾ ಆಚರಣೆಯಂತಹ ಘಟನೆಗಳಿಗೆ ಕಾನೂನು ಶಿಕ್ಷೆ ವಿಧಿಸುತ್ತಿದೆ. ಇದಕ್ಕೆ ಮೂಲ ಕಾರಣವೇ ಸಂವಿಧಾನವಾಗಿದ್ದು, ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿನ ಸುಧಾರಣೆಗಳಿಗೆ ಸಂವಿಧಾನವೇ ಆಧಾರವಾಗಿದೆ ಎಂದ ಅವರು, ಸಂವಿಧಾನ ಎಂಬುದು ಕತೆ, ಕಾದಂಬರಿಯಲ್ಲ. ಸಂವಿಧಾನ ಎಂಬುದು ರಾಜಕೀಯ, ಆರ್ಥಿಕ, ಸಾಮಾಜಿಕ ಕಾರ್ಯಕ್ರಮವಾಗಿದ್ದು, ಸಂವಿಧಾನವನ್ನು ಓದಿ, ಅರ್ಥೈಸಿಕೊಂಡು ಅದರಂತೆ ನಡೆಯುವುದು ದೇಶದ ಪ್ರತೀ ಪ್ರಜೆಯ ಕರ್ತವ್ಯವಾಗಬೇಕು. ದೇಶ ನಿಜವಾದ ಭಾರತವಾಗಿದ್ದು ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲ್ಲ. ಸಂವಿಧಾನ ರಚನೆಯಾದ ಮೇಲೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶ ಉಮೇಶ್ ಎಂ.ಅಡಿಗ, ದೇಶದ ಎಲ್ಲ ಧರ್ಮಗ್ರಂಥಗಳಿಗಿಂತಲೂ ಸಂವಿಧಾನ ಎಂಬ ಗ್ರಂಥವೇ ದೇಶದ ಎಲ್ಲ ಜಾತಿ, ಜನಾಂಗ, ಸಮುದಾಯದವರ ಸರ್ವಶ್ರೇಷ್ಟ ಗ್ರಂಥವಾಗಿದೆ. ಸಂವಿಧಾನವನ್ನು ಬಿಟ್ಟು ಭಾರತ ದೇಶವನ್ನು ಕಲ್ಪಿಸಿಕೊಳ್ಳಲೂ ಸಾಧವಿಲ್ಲ. ಆದರೆ ಪ್ರಸಕ್ತ ಸಂವಿಧಾನ ಸರಿ ಇಲ್ಲ ಎಂಬ ವಾದಗಳು ಕೇಳಿ ಬರುತ್ತಿವೆ. ಇಂತಹವರಿಗೆ ಸಂವಿಧಾನದ ಗಂಧಗಾಳಿ ತಿಳಿದಿಲ್ಲ. ಸಂವಿಧಾನ ಸಿರಿ ಇಲ್ಲ ಎನ್ನುವವರು ಒಮ್ಮೆಯಾದರೂ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಮಾತನಾಡಬೇಕು ಎಂದ ಅವರು, ಭಾರತ ಸಂವಿಧಾನ ದೇಶದ ಆಡಳಿತ ವ್ಯವಸ್ಥೆ, ಸಂಸ್ಥೆಗಳಿಗೆ ಮೂಲ. ಇಂತಹ ಸಂವಿಧಾನವನ್ನು ಓದಿದಾಗ ದೇಶದ ಬಗ್ಗೆ ಗೌರವ ಮೂಡುತ್ತದೆ. ಸಂವಿಧಾನ ಸೃಷ್ಟಿಕರ್ತರ ಬಗ್ಗೆಯೂ ಗೌರವ ಬರುತ್ತದೆ ಎಂದು ಅಭಿಪ್ರಾಯಿಸಿದರು.
ಉಪನ್ಯಾಸಕ ರಾಜಶೇಖರ್ ಕಿಗ್ಗಾ ಮಾತನಾಡಿ, ದೇಶದ ಹಾಗೂ ಜನರ ಎಲ್ಲ ಸಮಸ್ಯೆಗಳಿಗೂ ಸಂವಿಧಾನದಲ್ಲೇ ಪರಿಹಾರವಿದೆ. ಹಂಗಿನ ಬದುಕು, ಗುಲಾಮಗಿರಿ ಬದುಕು ಬೇಡ, ಸ್ವಾತಂತ್ರ್ಯದ ಜೀವನ ಬೇಕೆನ್ನುವವರು ಸಂವಿಧಾನವನ್ನು ಓದಲೇ ಬೇಕು. ಬಡವರ, ಶೋಷಿತರ ಕಣ್ಣೀರು ಒರೆಸುವುದೇ ಎಲ್ಲ ಧರ್ಮಗಳ ಸಾರ. ಭಾರತದ ಸಂವಿಧಾನ ಇಂತಹ ಜನರ ನೋವಿಗೆ ಧ್ವನಿಯಾದ ಧರ್ಮಗ್ರಂಥವಾಗಿದೆ. ನಾವೆಲ್ಲರೂ ಇಂತಹ ಧರ್ಮಗ್ರಂಥದ ಪರನಾಗಿರಬೇಕೆಂದರು.
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾ.ಬಸವರಾಜ್ ಚೇಂಗಟಿ, ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ವಿಜಯ್‍ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಗಮೋಹನ್ ದಾಸ್ ವಿರಚಿತ ಸಂವಿಧಾನ ಓದು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆ ಕಾರ್ಯಕ್ರಮದ ಬಳಿಕ ನಾಗಮೋಹನ್ ದಾಸ್ ಅವರು ಸಂವಿಧಾನದ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸಂವಾದ ನಡೆಸಿದರು.
ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸಂವಿಧಾನವನ್ನು ಅರ್ಥೈಸಿಕೊಳ್ಳಲು ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಗಳು, ರಾಜಕೀಯ, ಧಾರ್ಮಿಕ ವ್ಯವಸ್ಥೆ ಹಾಗೂ ಇತಿಹಾಸದ ತಿಳುವಳಿಕೆ ಅಗತ್ಯ. ಇದರ ಸಾಮಾನ್ಯ ಜ್ಞಾನವಿಲ್ಲದೇ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಓದಿದರೂ ಅರ್ಥವಾಗುವುದಿಲ್ಲ. ಸಂವಿಧಾನಾತ್ಮಕ ಕಾನೂನುಗಳೊಂದಿಗೆ ದೇಶದ ಪ್ರತೀ ಪ್ರಜೆಗೆ ಹುಟ್ಟಿನಿಂದ ಸಾಯುವವರೆಗೂ ಬಿಡದ ನಂಟಿರುತ್ತದೆ. ಆದ್ದರಿಂದ ಸಂವಿಧಾನವನ್ನು ಓದುವುದು ಪ್ರತೀ ಪ್ರಜೆಯ ಕರ್ತವ್ಯವಾಗಬೇಕು.
- ನಾಗಮೋಹನ್‍ದಾಸ್, ಹೈಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಾಧೀಶ
ದೇಶದಲ್ಲಿ ಹಿಂದೂ ಧರ್ಮದ ಅನುಯಾಯಿಗಳಿಗೆ ಭಗವದ್ಗೀತೆ ಮುಖ್ಯ ಧರ್ಮಗ್ರಂಥವಾಗಿದೆ. ಮುಸ್ಲಿಮರಿಗೆ ಕುರಾನ್ ಮುಖ್ಯ ಗ್ರಂಥವಾಗಿದೆ. ಕ್ರಿಶ್ಚಿಯನ್ನರಿಗೆ ಬೈಬಲ್ ಮುಖ್ಯ ಗ್ರಂಥವಾಗಿದೆ. ಆದರೆ ಇಡೀ ಭಾರತಕ್ಕೆ ಸಂವಿಧಾನವೇ ಸರ್ವಶ್ರೇಷ್ಟ ಧರ್ಮಗ್ರಂಥವಾಗಿದೆ. ಎಲ್ಲ ಧರ್ಮದ ಅನುಯಾಯಿಗಳು ದೇಶದ ಸಂವಿಧಾನಕ್ಕೆ ಬದ್ಧರಾಗಿರಲೇಬೇಕು.
- ನಾಗಮೋಹನ್‍ದಾಸ್, ಹೈಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಾಧೀಶ






.jpg)
.jpg)

