‘ಸಂಜೀವ್ ಭಟ್ ವಿರುದ್ಧ ಹಗೆ ಸಾಧಿಸುತ್ತಿರುವ ಕೇಂದ್ರ ಸರಕಾರ’
ನ್ಯಾಯಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಮಂಗಳೂರು, ಜೂ.27: ಗುಜರಾತ್‌ನಲ್ಲಿ ಹಲವು ಕಸ್ಟಡಿ ಸಾವುಗಳು ಸಂಭವಿಸಿದ್ದು, ಕೇವಲ ಸಂಜೀವ್ ಭಟ್ ಅವರನ್ನು ಗುರಿಯಾಗಿಸಿ ಕೇಂದ್ರ ಸರಕಾರ ತನ್ನ ಹಗೆ ಸಾಧಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ಗೆ ವಿಧಿಸಿರುವ ನ್ಯಾಯಾಂಗ ತೀರ್ಪು ದ್ವೇಷ ರಾಜಕೀಯದ ಷಡ್ಯಂತ್ರದ ಭಾಗ ಎಂದು ಆರೋಪಿಸಿ, ಅವರ ಪರ ನ್ಯಾಯಕ್ಕಾಗಿ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ಗುಜರಾತ್ ಹತ್ಯಾಕಾಂಡದ ಸಂದರ್ಭ ಸರಕಾರದ ನೇರ ಕೈವಾಡವನ್ನು ಬಹಿರಂಗಪಡಿಸಿದರ ಪರಿಣಾಮವೇ ಸಂಜೀವ್ ಭಟ್ ಅವರಿಗೆ ಈ ಸನ್ನಿವೇಶ ನಿರ್ಮಾಣವಾಗಿದೆ. ಪ್ರಕರಣವನ್ನು ಅವಲೋಕಿಸಿದರೆ ನ್ಯಾಯದ ಧ್ವನಿಯನ್ನು ಅಡಗಿಸುತ್ತಿರುವುದು ಕಂಡುಬರುತ್ತಿದೆ. ಫ್ಯಾಶಿಸ್ಟ್ ಸಿದ್ಧಾಂತದ ಯಾವುದೇ ಬೆದರಿಕೆಗಳಿಗೆ ಕುಗ್ಗದೆ ಸಂಜೀವ್ ಭಟ್ ಅವರ ಪರ ಇಡೀ ದೇಶ ಧ್ವನಿಯಾಗುವ ಅಗತ್ಯತೆ ಎದುರಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳ ವಿರುದ್ಧ ಸಾಂವಿಧಾನಿಕವಾಗಿ ಪ್ರತಿರೋಧಿಸಬೇಕು ಮತ್ತು ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಕಾನೂನುಗಳನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಜೀವ್ ಭಟ್ ವಿರುದ್ಧ ನಡೆದ ರಾಜಕೀಯ ಪಿತೂರಿಗಳ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರು.
ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್, ಮಂಗಳೂರು ತಾಲೂಕು ಅಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಜೊತೆ ಕಾರ್ಯದರ್ಶಿ ತಾಜುದ್ದೀನ್ ಮತ್ತಿತರು ಉಪಸ್ಥಿತರಿದ್ದರು. ಫಹಾದ್ ಅನ್ವರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.









