ಪುತ್ತೂರು ತಹಶೀಲ್ದಾರ್ ಜಾಮೀನು ಅರ್ಜಿ ವಜಾ
ಪುತ್ತೂರು: ಕ್ಯಾಟರಿಂಗ್ ಮಾಲಕರಿಂದ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಎಸಿಬಿ ಯಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಮಂಗಳೂರಿನ ಮೂರನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಜಾಮೀನು ಅರ್ಜಿಯ ಕುರಿತು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಆರೋಪಿ ತಹಶೀಲ್ದಾರ್ ಪರ ವಕೀಲರ ವಾದ ಮಂಡನೆ ಜೂ. 25ರಂದು ನಡೆದಿತ್ತು. ಅರ್ಜಿಯ ಕುರಿತ ತೀರ್ಪನ್ನು ಜೂ. 27ರಂದು ನೀಡುವುದಾಗಿ ಸೆಷನ್ಸ್ ನ್ಯಾಯಾಲಯ ಪ್ರಕಟಿಸಿತ್ತು.
ಜೂ. 20ರಂದು ಪುತ್ತೂರಿನ ಪೈ ಕೆಟರರ್ಸ್ ಮಾಲಕ ದಿನೇಶ್ ಪೈ ಅವರಿಂದ ಲೋಕಸಭಾ ಚುನಾವಣೆಯ ಸಂದರ್ಭ ಆಹಾರ ಸರಬರಾಜು ಮಾಡಿದ ಕುರಿತು ಪಾವತಿಸಬೇಕಾದ ರೂ. 6.25ಲಕ್ಷ ಬಿಲ್ ಮೊತ್ತದಲ್ಲಿ ತನಗೆ ರೂ. 2ಲಕ್ಷ ಲಂಚ ನೀಡಬೇಕೆಂದು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಬೇಡಿಕೆ ಇಟ್ಟಿದ್ದನು. ದಿನೇಶ್ ಪೈ ಮಂಗಳೂರು ಎಸಿಬಿಗೆ ಈ ಕುರಿತು ದೂರು ನೀಡಿದ್ದರು.
ಎಸಿಬಿಯ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ತಹಶೀಲ್ದಾರನನ್ನು ಲಂಚದ ಮೊತ್ತ ಸಹಿತ ಬಂಧಿಸಲಾಗಿತ್ತು. ಅಂದು ರಾತ್ರಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಸರಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಆರೋಪಿ ತಹಶೀಲ್ದಾರ್ ತನ್ನ ವಕೀಲರ ಮೂಲಕ ಮಾಡಿದ ಮನವಿಯನ್ನು ನ್ಯಾಯಾಲಯ ವೈದ್ಯರ ವರದಿಯಂತೆ ತಿರಸ್ಕರಿಸಿತ್ತು. ಇದೀಗ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.







