ಮರಾಠ ಮೀಸಲಾತಿ ನ್ಯಾಯಬದ್ಧ, ಆದರೆ ಶೇ.16ರಿಂದ ಶೇ.12-13ಕ್ಕೆ ಇಳಿಸಬೇಕು: ಉಚ್ಚ ನ್ಯಾಯಾಲಯ

ಮುಂಬೈ, ಜೂ.27: ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ನೀಡಲಾಗಿರುವ ಮೀಸಲಾತಿ ಸಾಂವಿಧಾನಿಕವಾಗಿ ಸಿಂಧುವಾಗಿದೆ. ಆದರೆ ಅದನ್ನು ಶೇ.16ರಿಂದ ಶೇ. 12-13ಕ್ಕೆ ಇಳಿಸುವ ಅಗತ್ಯವಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ತಿಳಿಸಿದೆ.
ನ್ಯಾಯಾಧೀಶರಾದ ರಂಜಿತ್ ಮೋರೆ ಮತ್ತು ಭಾರತಿ ದಾಂಗ್ರೆಯವರ ವಿಭಾಗೀಯ ಪೀಠವು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸ್ಸಿನ ಆಧಾರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸುವ ಮತ್ತು ಮೀಸಲಾತಿಯನ್ನು ನೀಡುವ ಕಾನೂನಾತ್ಮಕ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ನ್ಯಾಯಾಲಯ ತಿಳಿಸಿದೆ.
ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮರಾಠ ಸಮುದಾಯಕ್ಕೆ ಶೇ.16 ಮೀಸಲಾತಿಯನ್ನು ನೀಡಿರುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಹಾಕಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಹೇಳಿಕೆ ನೀಡಿದೆ. ಯಾವುದೇ ರಾಜ್ಯದಲ್ಲಿ ಮೀಸಲಾತಿಯು ಶೇ.50ನ್ನು ದಾಟ ಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗಾಗಿ ಸರಕಾರದ ಈ ನಿರ್ಧಾರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಮನವಿದಾರರು ಆರೋಪಿಸಿದ್ದಾರೆ.







