ನೂತನ ಶಿಕ್ಷಣ ನೀತಿ ಕರಡಿನ ಬಗ್ಗೆ ಅಭಿಪ್ರಾಯ ಸಲ್ಲಿಸುವ ಗಡುವು ವಿಸ್ತರಣೆ: ಸಚಿವಾಲಯ

ಹೊಸದಿಲ್ಲಿ, ಜೂ.27: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸಲು ನೀಡಲಾಗಿದ್ದ ಅಂತಿಮ ಗಡುವನ್ನು ಜುಲೈ 31ರ ವರೆಗೆ ವಿಸ್ತರಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿ ರೂಪಿಸಿರುವ ನೂತನ ಶಿಕ್ಷಣ ನೀತಿಯ ಕರಡು ಶಿಕ್ಷಣದ ಪ್ರತಿಹಂತದಲ್ಲೂ ಸುಧಾರಣೆಯನ್ನು ಹೊಂದಿದೆ. ಈ ಕರಡಿನ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಸಲ್ಲಿಸಲು ಜೂನ್ 30ರ ಅಂತಿಮ ಗಡುವು ನೀಡಲಾಗಿತ್ತು.
ನೂತನ ಎನ್‌ಇಪಿ ಬಗ್ಗೆ ವರದಿಯನ್ನು ಸಾರ್ವಜನಿಕ ಜಾಲತಾಣದಲ್ಲಿ ಹಾಕಲಾಗಿದೆ. ಪ್ರತಿ ಹಂತದಲ್ಲೂ ಚರ್ಚೆಗಳನ್ನು ನಡೆಸಿದ ಬಳಿಕ ಈ ಕರಡನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಇದ್ದ ಅಂತಿಮ ಗಡುವನ್ನು ವಿಸ್ತರಿಸಲಾಗುವುದು ಎಂದು ಪೊಕ್ರಿಯಾಲ್ ತಿಳಿಸಿದ್ದಾರೆ. ಸಮಿತಿಯು ಯಾವುದೇ ಸಭೆಗಳನ್ನು ನಡೆಸದೆ ಮತ್ತು ಚರ್ಚಿಸದೆ ಈ ಕರಡನ್ನು ಸಿದ್ಧಪಡಿಸಿದೆ ಎಂದು ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅವರ ಆರೋಪದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.







