ಸಿಜಿಕೆ ಬೀದಿರಂಗ ದಿನದ ಯಶಸ್ಸಿಗೆ ಚಳವಳಿಯ ಅಗತ್ಯವಿದೆ: ಸಿ.ಕೆ.ಗುಂಡಣ್ಣ
ಬೆಂಗಳೂರು, ಜೂ.27: ಸಿಜಿಕೆ ಬೀದಿರಂಗ ಭೂಮಿ ದಿನವನ್ನು ಹೆಚ್ಚಿನ ಮಟ್ಟದಲ್ಲಿ ಯಶಸ್ವಿಗೊಳಿಸಲು ಚಳವಳಿಯ ಅಗತ್ಯವಿದೆ ಎಂದು ಹಿರಿಯ ರಂಗಕರ್ಮಿ ಸಿ.ಕೆ.ಗುಂಡಣ್ಣ ಅಭಿಪ್ರಾಯಪಟ್ಟರು.
ಗುರುವಾರ ನಗರದ ನಯನ ರಂಗಮಂದಿರದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ ಆಯೋಜಿಸಿದ್ದ ಸಿಜಿಕೆ ಬೀದಿರಂಗ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಜಿಕೆ ಬೀದಿ ರಂಗ ದಿನವನ್ನು ವಿಶ್ವದಾದ್ಯಂತ ಆಚರಿಸಲು ನಾವು ಚಳವಳಿಯನ್ನು ರೂಪಿಸಬೇಕು. ಚಳವಳಿಯ ಮೂಲಕ ಸಿಜಿಕೆಯ ರಂಗ ಆಶಯಗಳನ್ನು ಎಲ್ಲರಿಗೂ ತಲುಪಿಸಬೇಕು. ಹೀಗಾಗಿ ವಿಶ್ವದಾದ್ಯಂತ ಇರುವ ಸಿಜಿಕೆ ಶಿಷ್ಯರು, ಒಡನಾಡಿಗಳು ಅವರ ವಿಚಾರಗಳನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ತಿಳಿಸಿದರು.
ಬೀದಿರಂಗ ದಿನದ ಚಳವಳಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸಬೇಕು ಎಂದು ಹಲವು ಸಹಮಿತ್ರರು ತೀರ್ಮಾನಿಸಿದ್ದೇವೆ. ಸಿಜಿಕೆ ಒಬ್ಬ ಕನಸುಗಾರ ಅವರು ರಂಗಭೂಮಿಗೆ ಬಂದಿದ್ದು ರಂಗ ನಟನಾಗಬೇಕೆಂದು, ಅದು ಸಾಧ್ಯವಾಗಲಿಲ್ಲ. ಕಡಿಮೆ ಸಮಯದಲ್ಲೇ ವಿವಿಧ ಸಂಘಟನಾ ಜವಾಬ್ದಾರಿಯನ್ನು ಹೊತ್ತುಕೊಂಡು, ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ, ರಾಷ್ಟ್ರಮಟ್ಟದ ರಂಗ ನಿರ್ದೇಶಕರಾಗಿ ಸಿಜಿಕೆ ಖ್ಯಾತಿಗಳಿಸುತ್ತಾರೆ ಎಂದು ನೆನೆದರು.
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಸರಕಾರದ ವಿರುದ್ಧ ಬಂಡಾಯವೆದ್ದು ರಂಗಭೂಮಿಗಾಗಿ ಅನೇಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಯಾವ ನಾಟಕವನ್ನು ರಂಗದ ಮೇಲೆ ತೆಗೆದುಕೊಂಡರೋ ಅದರ ಸಾಹಿತ್ಯದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಲ್ಲದೆ ಗಾಂಧಿ ಸ್ಟಡಿ ಸೆಂಟರ್ ನಿರ್ದೇಶಕರಾದ ಮೇಲೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತೆ ನೋಡಿಕೊಂಡರು ಎಂದು ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿರುವ ಸಿಜಿಕೆಯ ರಂಗಪ್ರಜ್ಞೆಯನ್ನು ಬಲ್ಲ ಗೆಳೆಯರು ಸಂಘಟನೆಗಳು ಅವರ ಹುಟ್ಟುಹಬ್ಬದ ದಿನದಂದು ಪಾಲ್ಗೊಂಡು, ಸಮಾನ ಮನಸ್ಕರಾದ ಜನರೊಂದಿಗೆ ಬೆರೆಯುತ್ತಾರೆ. ಆ ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಕಲಾವಿದರಿಗೆ ರಂಗ ಗೌರವವನ್ನು ನೀಡಲಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಹೊಸ ಸವಾಲುಗಳನ್ನು ಚರ್ಚಿಸಿ, ಭಿನ್ನ ಕಾರ್ಯಕ್ರಮಗಳನ್ನು ರೂಪಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.







