ಬಂಟ್ವಾಳ: ವಿವಿಧ ಕಡೆಗಳಲ್ಲಿ ಡೆಂಗ್, ಮಲೇರಿಯಾ ಪ್ರಕರಣಗಳು ಪತ್ತೆ
ಬಂಟ್ವಾಳ, ಜೂ. 27: ಮಳೆಗಾಲ ಪ್ರಾರಂಭವಾಗುವ ಮೊದಲೇ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಶಂಕಿತ ಡೆಂಗ್ ಹಾಗೂ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ನಾಗರಿಕರು ಭಯ ಭೀತರಾಗಿದ್ದಾರೆ.
ಜೂನ್ ತಿಂಗಳಲ್ಲಿ ಒಟ್ಟು 7 ಡೆಂಗ್ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಎರಡು ಖಚಿತಗೊಂಡಿವೆ. ಅದಲ್ಲದೆ, ಜನವರಿಯಿಂದೀಚೆಗೆ 5 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದ್ದಾರೆ.
ಫರಂಗಿಪೇಟೆ, ಕುಳಾಲು, ವಿಟ್ಲಪಡ್ನೂರು, ಕಲ್ಲಡ್ಕ, ಪುಂಜಾಲಕಟ್ಟೆ ಪರಿಸರದಿಂದ ಒಟ್ಟು 7 ಪ್ರಕರಣಗಳು ಡೆಂಗ್ ಶಂಕೆಯದ್ದಾಗಿದ್ದು, ಇದರಲ್ಲಿ ಕಲ್ಲಡ್ಕ ಮತ್ತು ಪುಂಜಾಲಕಟ್ಟೆಯ ಇಬ್ಬರಿಗೆ ಡೆಂಗ್ ಬಾಧಿತವಾಗಿದೆ. ಇಬ್ಬರೂ ಗುಣಮುಖರಾಗಿ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಟ್ಟು ಬಿಟ್ಟು ಮಳೆ ಬರುವ ಕಾರಣ ಸೊಳ್ಳೆಗಳ ಉತ್ಪತ್ತಿ ಅಧಿಕವಾಗುತ್ತಿದ್ದು, ಈ ಕುರಿತು ಎಚ್ಚರವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದ್ದು, ಸಮುದಾಯ ಸಹಭಾಗಿತ್ವದಿಂದಷ್ಟೇ ರೋಗನಿಯಂತ್ರಣ ಸಾಧ್ಯ. ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವುದು ಬೇಡ. ರೋಗ ಪೀಡಿತರಿಗೆ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಲು ಹಾಗೂ ಈ ಕುರಿತು ನಿಗಾ ವಹಿಸಲು ಸೂಕ್ತ ಕ್ರಮ ವಹಿಸಲಾಗಿದೆ. ಘನತ್ಯಾಜ್ಯಗಳನ್ನು ಚರಂಡಿಗೆ ಎಸೆಯದೆ ನಗರಸಭೆಯ ವಾಹನಕ್ಕೆ ನೀಡಬೇಕು. ನೀರನ್ನು ಶೇಖರಣೆ ಮಾಡುತ್ತಿದ್ದರೆ ಅದನ್ನು ಸರಿಯಾಗಿ ಮುಚ್ಚಿಡಬೇಕು. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.







