ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಪರದಾಟ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಜೂ.27: ಸರಕಾರ ಜಲ ಸಂರಕ್ಷಣೆಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಯುನೈಟೆಡ್ ಬೆಂಗಳೂರು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚೆನ್ನೈ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೀರಿನ ಮೂಲವನ್ನು ಸಂರಕ್ಷಣೆ ಮಾಡದೆ ಹೋದರೆ ಇಂತಹ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗತ್ತದೆ ಎಂದು ಎಚ್ಚರಿಕೆ ನೀಡಿದರೆ.
ಬೆಂಗಳೂರು ಕೆರೆಗಳ ನಗರಿ ಎಂಬ ಪ್ರಖ್ಯಾತಿಯಿಂದ ಕಾಂಕ್ರೀಟ್ ಕಾಡು ಎಂಬ ಕುಖ್ಯಾತಿಯ ಕಿರೀಟ ಹೊತ್ತುಕೊಂಡಿದ್ದು, ಈಗಾಗಲೇ ನಗರದಲ್ಲಿ ಎಲ್ಲ ನೀರಿನ ಮೂಲಾಧಾರಗಳೂ ಮಾಯವಾಗಿವೆ. ತ್ವರಿತವಾಗಿ ಆಗಿರುವ ನಗರಿಕರಣ, ಉಬ್ಬುತ್ತಲೇ ಸಾಗುತ್ತಿರುವ ಜನಸಂಖ್ಯೆ ಹಾಗೂ ಅತ್ಯಂತ ಅಸಮರ್ಪಕ ನೀರಿನ ನಿರ್ವಹಣೆ ಯಿಂದಾಗಿ ನೀರಿನ ಕೊಳವೆಗಳೇ ಬರಿದಾಗುತ್ತಿವೆ ಅಂತರ್ಜಲದ ಮಟ್ಟ ಪಾತಾಳದತ್ತ ಕುಸಿಯುತ್ತಿದೆ ಎಂದು ವಿಷಾದಿಸಿದರು.
ಎನ್.ಲಕ್ಷ್ಮಣ್ ರಾವ್ ನೇತೃತ್ವದ ತಜ್ಞರ ಸಮಿತಿ, ಕೆರೆಗಳ ಒತ್ತುವರಿ ಕುರಿತು ಕೋಳಿವಾಡ ಸಮಿತಿ, ನ್ಯಾಯಮೂರ್ತಿ ಎನ್.ಕೆ.ಪಾಟಿಲ್ ಸಮಿತಿ ನೀರಿನ ಸಂರಕ್ಷಣೆ ಬಗ್ಗೆ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಸಮರ್ಪಕವಾಗಿ ಅಧ್ಯಯನ ನಡೆಸಿ ಮುಂದಿನ ಪೀಳಿಗೆಗಾಗಿ ಜಲ ಸಂಕ್ಷಣೆ ಮಾಡುವ ಕಡೆಗೆ ಸರಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ನೀರಿನ ಸಂರಕ್ಷಣೆಗೆ ಪರಿಹಾರ: ಮಳೆ ನೀರಿನ ಕೊಯ್ಲು, ಅಂತರ್ಜಲ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸುವುದು, ಮನೆಗಳಲ್ಲಿನ ಶೌಚಾಲಯ, ವಾಷ್ ಬೇಸಿನ್, ಶವರ್, ತೋಟಗಾರಿಕೆ, ಕಾರ್ ತೊಳೆಯುವುದು ಮಾದಲಾದ ಕಡೆಗಳಲ್ಲಿ ನೀರು ವ್ಯಯವಾಗುವುದನ್ನು ತಪ್ಪಿಸಬೇಕು. ಕೆರೆಗಳನ್ನು ಸಂರಕ್ಷಿಸಬೇಕು, ಮರಗಿಡಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು, ಮಳೆನೀರನ್ನು ಸಂರಕ್ಷಿಸಬೇಕು. ಅಲ್ಲದೆ ನೀರನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದರ ಬಗ್ಗೆ ಸರಕಾರ ಹಾಗೂ ಬಿಬಿಎಂಪಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.







