ಎಂಸಿಐ ಆಡಳಿತ ನಿರ್ವಹಣೆ: ನೂತನ ವಿಧೇಯಕ ಮಂಡನೆ

ಹೊಸದಿಲ್ಲಿ, ಜೂ.27: ಹಗರಣದ ಕಳಂಕಕ್ಕೆ ಒಳಗಾಗಿರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್(ಎಂಸಿಐ) ಅನ್ನು 2 ವರ್ಷಗಳ ಮಟ್ಟಿಗೆ ಅಮಾನತುಗೊಳಿಸಿ, ನೂತನ ಆಡಳಿತ ಮಂಡಳಿಗೆ ಆಡಳಿತ ನಿರ್ವಹಿಸಲು ಅವಕಾಶ ಕಲ್ಪಿಸುವ ಉದ್ದೇಶದ ನೂತನ ವಿಧೇಯಕವನ್ನು ಸರಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ.
ವೈದ್ಯಕೀಯ ಶಿಕ್ಷಣದ ನಿಯಂತ್ರಣ ಮಂಡಳಿಯಾಗಿರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಅನ್ನು 2 ವರ್ಷಗಳ ಮಟ್ಟಿಗೆ ಅಮಾನತುಗೊಳಿಸಿ ಸಮಿತಿಯ ಜಬಾವ್ದಾರಿಯನ್ನು ಆಡಳಿತ ಮಂಡಳಿಗೆ ಒಪ್ಪಿಸುವ ‘ಇಂಡಿಯನ್ ಮೆಡಿಕಲ್ ಕೌನ್ಸಿಲ್ (ತಿದ್ದುಪಡಿ) ವಿಧೇಯಕ 2019’ ಅನ್ನು ಲೋಕಸಭೆಯಲ್ಲಿ ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಚೌಬೆ ಮಂಡಿಸಿದರು. ದೇಶದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟವನ್ನು ಖಾತರಿಪಡಿಸುವ ಉದ್ದೇಶದಿಂದ ವಿಧೇಯಕ ಮಂಡಿಸಲಾಗುವುದು ಎಂದು ಕಳೆದ ವಾರ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ೆ ಅಂಗೀಕಾರ ದೊರೆತ ಬಳಿಕ ಕೇಂದ್ರ ಸರಕಾರ ಹೇಳಿಕೆಯಲ್ಲಿ ತಿಳಿಸಿತ್ತು.
ಎಂಸಿಐಯ 2 ವರ್ಷಗಳ ಅಮಾನತು ಅವಧಿಯಲ್ಲಿ ಆಡಳಿತ ಮಂಡಳಿ 1956ರ ಐಎಂಸಿ ಕಾಯ್ದೆಯಡಿ ಆಡಳಿತ ನಿರ್ವಹಿಸಲಿದೆ. ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆಯನ್ನು ಈಗಿರುವ 7ರಿಂದ 12ಕ್ಕೇರಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ. ಎಂಸಿಐ ಸ್ವೇಚ್ಛಾನುಸಾರ ಕಾರ್ಯನಿರ್ವಹಿಸುತ್ತಿದ್ದು, ಐಎಂಸಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಂಸಿಐ ಕಾರ್ಯನಿರ್ವಹಣೆಗೆ ಮೇಲುಸ್ತುವಾರಿ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿತ್ತು. ಆದರೆ ಸಮಿತಿಯ ಸಲಹೆಗಳನ್ನೂ ಎಂಸಿಐ ನಿರ್ಲಕ್ಷಿಸುತ್ತಿದೆ ಎಂಬ ಕಾರಣ ನೀಡಿ ಸಮಿತಿಯ ಸದಸ್ಯರು ರಾಜೀನಾಮೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಐಎಂಸಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸರಕಾರ ಇಂಡಿಯನ್ ಮೆಡಿಕಲ್ ಕೌನ್ಸಿಲ್(ತಿದ್ದುಪಡಿ) ಆಧ್ಯಾದೇಶ, 2018ನ್ನು ಮಂಡಿಸಿತ್ತು. ಲೋಕಸಭೆಯಲ್ಲಿ ಆಧ್ಯಾದೇಶ ಅಂಗೀಕೃತಗೊಂಡರೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರಲಿಲ್ಲ. 16ನೇ ಲೋಕಸಭೆಯ ಸಮಾಪನದೊಂದಿಗೆ ಆಧ್ಯಾದೇಶವೂ ರದ್ದಾಗಿತ್ತು. ಇದೀಗ ಸರಕಾರ ಹೊಸ ವಿಧೇಯಕವನ್ನು ಮಂಡಿಸಿದೆ.







