ಗೌರಿ ಲಂಕೇಶ್ ಹತ್ಯೆಯ 'ಕೋಡ್ ನೇಮ್' ಬಾಯ್ಬಿಟ್ಟ ಆರೋಪಿ ಕಲಸ್ಕರ್
ಹತ್ಯೆಗೆ ಸಂಚು ನಡೆದದ್ದು ಯಾರ ಮನೆಯಲ್ಲಿ ಗೊತ್ತಾ

ಮುಂಬೈ, ಜೂ.27: ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ನಡೆಸುವ ಕಾರ್ಯಾಚರಣೆಗೆ 'ಇವೆಂಟ್' ಎಂದು ಸಾಂಕೇತಿಕ ಹೆಸರು (ಕೋಡ್ ನೇಮ್) ನೀಡಲಾಗಿತ್ತು ಎಂದು ಪ್ರಕರಣದ ಆರೋಪಿ ಶರದ್ ಕಲಸ್ಕರ್ ಪೊಲೀಸರಿಗೆ ತಿಳಿಸಿದ್ದಾನೆ.
ಗೌರಿ ಲಂಕೇಶ್ ಹತ್ಯೆಯ ಯೋಜನೆ ಮತ್ತು ಅಗತ್ಯ ವಸ್ತುಗಳ ಸಾಗಾಟದಲ್ಲಿ ಕಲಸ್ಕರ್ ಭಾಗಿಯಾಗಿದ್ದ ಮತ್ತು ಶೂಟರ್ ಪರಶುರಾಮ್ ವಾಗ್ಮೊರೆ ಗೌರಿ ಅವರಿಗೆ ಗುಂಡಿಕ್ಕಿದ ನಂತರ ಆ ಬಂದೂಕನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಆತನಿಗೆ ನೀಡಲಾಗಿತ್ತು. ಹತ್ಯೆಯ ಯೋಜನೆಯನ್ನು ಇನ್ನೊರ್ವ ಆರೋಪಿ ಭರತ್ ಕುರ್ನೆಯ ಮನೆಯಲ್ಲಿ ರೂಪಿಸಲಾಯಿತು. ಸಭೆಯ ಮೊದಲ ದಿನ ಅಮೋಲ್ ಕಾಲೆ ಎಲ್ಲರಿಗೂ ವಿವಿಧ ಜವಾಬ್ದಾರಿಗಳನ್ನು ನೀಡಿದ. ಕಾರ್ಯಾಚರಣೆಗೆ ಇವೆಂಟ್ ಎಂದು ಕೋಡ್ ನೇಮ್ ಇಡಲಾಯಿತು. ನಂತರ ಶರದ್ ಕಲಸ್ಕರ್, ಪರಶುರಾಮ ವಾಗ್ಮೊರೆ ಅಲಿಯಾಸ್ ಬಿಲ್ಡರ್ ಮತ್ತು ಇನೊರ್ವ ಆರೋಪಿ ಮಿಥುನ್ ಎಂಬಾತ ಭರತ್ ಕುರ್ನೆಯ ಜೊತೆ ಆತನ ಮನೆ ಸಮೀಪದ ಗುಡ್ಡಕ್ಕೆ ಶೂಟಿಂಗ್ ಅಭ್ಯಾಸಿಸಲು ತೆರಳಿದರು ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಈ ಎಲ್ಲ ಮಾಹಿತಿಗಳನ್ನು ಶರದ್ ಕಲಸ್ಕರ್ ವಿಚಾರಣೆಯ ವೇಳೆ ಪೊಲೀಸರಿಗೆ ನೀಡಿದ್ದಾನೆ.