ಹಿಂದೂಗಳು ಭಯದಿಂದ ವಲಸೆ ಹೋಗುತ್ತಿದ್ದಾರೆ ಎನ್ನುವುದು ಸುಳ್ಳು: ಬಿಜೆಪಿ ನಾಯಕನ ದೂರಿನ ಬಗ್ಗೆ ಪೊಲೀಸರ ಸ್ಪಷ್ಟನೆ

ಮೀರತ್, ಜೂ.28: ಇಲ್ಲಿನ ಪ್ರಹ್ಲಾದ್ ನಗರ್ ಟೌನ್ ಪ್ರದೇಶದ ಮಹಿಳೆಯರಿಗೆ ಇನ್ನೊಂದು ಸಮುದಾಯದ ಮಂದಿ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ 125 ಹಿಂದು ಕುಟುಂಬಗಳು ಅಲ್ಲಿಂದ ಅನಿವಾರ್ಯವಾಗಿ ವಲಸೆ ಹೋಗಿವೆ ಎಂದು ಸ್ಥಳೀಯ ಬಿಜೆಪಿ ನಾಯಕರೊಬ್ಬರು ನಮೋ ಆ್ಯಪ್ ನಲ್ಲಿ ದೂರು ಸಲ್ಲಿಸಿದ ನಂತರ ಪ್ರತಿಕ್ರಿಯಿಸಿರುವ ಮೀರತ್ ಪೊಲೀಸರು, ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಹಾಗೂ ಜನರು ಭಯದಿಂದ ವಲಸೆ ಹೋಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಆದರೂ ಈ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ನಗರದ ಮ್ಯಾಜಿಸ್ಟ್ರೇಟ್ ಸಂಜಯ್ ಪಾಂಡೆ ಹಾಗೂ ಕೋತ್ವಾಲಿ ಡಿವೈಎಸ್ಪಿ ದಿನೇಶ್ ಚಂದ್ ಶುಕ್ಲಾ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಸಮಿತಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕಿದೆ.
ಹಿಂದೂ ಕುಟುಂಬಗಳು ತಮ್ಮ ಮನೆಗಳನ್ನು ಮಾರಿ ಭಯದಿಂದ ವಲಸೆ ಹೋಗುತ್ತಿವೆ ಎಂದು ದೂರುದಾರ ಭವೇಶ್ ಮೆಹ್ತಾ ಆರೋಪಿಸಿದ್ದರು. ಮಹಿಳೆಯರಿಗೆ ಕಿರುಕುಳ ನೀಡಿದ್ದನ್ನು ಆಕ್ಷೇಪಿಸಿದವರಿಗೆ ಥಳಿಸಲಾಗುತ್ತಿದೆ ಎಂದೂ ಆತ ದೂರಿದ್ದರು.
“ಚುಡಾವಣೆ ಹಾಗೂ ಹಿಂಬಾಲಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿರುವುದರಿಂದಾಗಿ ನಮ್ಮ ಪ್ರದೇಶದ ಮಹಿಳೆಯರು ಮನೆಗಳಿಂದ ಹೊರ ಹೋಗಲು ಭಯ ಪಡುತ್ತಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗದೇ ಇರುವುದರಿಂದ ಉನ್ನತ ಮಟ್ಟದಲ್ಲಿ ದೂರು ದಾಖಲಿಸಬೇಕಾಯಿತು'' ಎಂದು ಮೆಹ್ತಾ ಹೇಳಿದ್ದಾರೆ.
“ಸ್ಥಳದಲ್ಲೀಗ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆದರೆ ಎಲ್ಲಿಯೂ ಜನರು ಮನೆಗಳನ್ನು ಭಯದಿಂದ ಬಿಟ್ಟು ಹೋಗುವುದು ಕಂಡು ಬಂದಿಲ್ಲ, ಆದರೆ ಕೆಲ ಜನರು ಮನೆಗಳನ್ನು ಮಾರಾಟ ಮಾಡುತ್ತಿರುವುದು ನಿಜ. ಆದರೆ ಅದು ಸಾಮಾನ್ಯ ಪ್ರಕ್ರಿಯೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತೀಳಿಸಿದ್ದಾರೆ.
ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ಕುರಿತಂತೆ ತನಿಖೆಗೆ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಆದೇಶಿಸಿದ್ದಾರೆ.







