ಕಳಸ ತಾಲೂಕಿಗೆ ಕುದುರೆಮುಖ ಟೌನ್‍ಶಿಪ್ ಬಳಕೆಗೆ ಅಸಮಾಧಾನ: ಸರಕಾರಕ್ಕೆ ಪತ್ರ
ಚಿಕ್ಕಮಗಳೂರು ಜಿ.ಪಂ. ಸರ್ವ ಸದಸ್ಯರ ಸಭೆ

ಚಿಕ್ಕಮಗಳೂರು, ಜೂ.28: ಜಿಲ್ಲೆಯ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯದವರ ಮನೆಗಳಿಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ವಿದ್ಯುಧೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪಟ್ಟಿ ಸಿದ್ಧಪಡಿಸಿದ್ದರೂ, ಮೆಸ್ಕಾಂ ಅಧಿಕಾರಿಗಳು ಮೇಲ್ವರ್ಗದವರ ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಪರಿಶಿಷ್ಟರಿಗೆ ಸರಕಾರಿ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯವಹಿಸಿದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಬೇಕೆಂಬ ಜಿ.ಪಂ. ಸದಸ್ಯ ಶೃಂಗೇರಿ ಶಿವಣ್ಣ ಶುಕ್ರವಾರ ಜಿ.ಪಂ. ಚೇರಿಯಲ್ಲಿ ನಡೆದ ಸರ್ವ ಸಭೆಯಲ್ಲಿ ಆಗ್ರಹಿದದರು.
ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮೊದಲು ಮಾತನಾಡಿದ ಶೃಂಗೇರಿ ಶಿವಣ್ಣ, ಶೃಂಗೇರಿ ತಾಲೂಕಿನಾದ್ಯಂತ ವಿದ್ಯುತ್ ಸೌಲಭ್ಯ ಇಲ್ಲದೇ ಕತ್ತಲೆಯ ಕೂಪದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಕುಟುಂಬಗಳು ಜೀವನ ನಡೆಸುತ್ತಿವೆ. ಇಂತಹ ಕುಟುಂಬಗಳನ್ನು ಗುರುತಿಸಿ ದೀನ್ ದಯಾಳ್ ಉಪಾಧ್ಯಾಯ ವಿದ್ಯುಧೀಕರಣ ಯೋಜನೆಯಡಿಯಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಫಲಾನುಭವಿಗಳನ್ನಾಗಿ ಗುರುತಿಸಲಾಗಿದೆ. ಆದರೆ ಮೆಸ್ಕಾಂ ಅಧಿಕಾರಿಗಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೇಲ್ವರ್ಗದವರ ಮನೆಗಳಿಗೆ ಮಾತ್ರ ವಿದ್ಯತ್ ಸಂಪರ್ಕ ಕಲ್ಪಿಸಿದ್ದಾರೆ. ಮೇಲ್ವರ್ಗದವರ ಮನೆಗಳ ಪಕ್ಕದಲ್ಲೇ ಇರುವ ಪರಿಶಿಷ್ಟರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ. ಕಳೆದ ಸಾಲಿನಲ್ಲಿ ಗುರುತಿಸಿದ ಫಲಾನುಭವಿಗಳ ಮನೆಗಳಿಗೂ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಪರಿಶಿಷ್ಟರಿಗೆ ಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷೆ ಹಾಗೂ ಸಿಇಒ ಅವರನ್ನು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮೆಸ್ಕಾಂ ಅಧಿಕಾರಿಗಳು ಇತರ ವರ್ಗದವರಿಗೆ ಸೌಲಭ್ಯ ನೀಡಿ, ಪರಿಶಿಷ್ಟರ ಮನೆಗಳಿಗೆ ಸೌಲಭ್ಯ ನೀಡದಿರುವುದು ಅಕ್ಷಮ್ಯ. ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುವುದು ಸೂಕ್ತ ಎಂದರು. ಇದಕ್ಕೆ ಕೊಪ್ಪ ಸದಸ್ಯ ರಾಮಸ್ವಾಮಿ ಬೆಂಬಲ ವ್ಯಕ್ತಪಡಿಸಿ, ಜಿಲ್ಲಾದ್ಯಂತ ಅಧಿಕಾರಿಗಳು ಈ ಯೋಜನೆಯನ್ನು ನಿರ್ಲಕ್ಷಿಸಿದ್ದಾರೆ. ಕಾನೂನು ಕ್ರಮಕೈಗೊಳ್ಳವುದೇ ಸೂಕ್ತ ಎಂದರು.
ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಧ್ಯಪ್ರವೇಶಿಸಿ ಮಾತನಾಡಿ, ಪರಿಶಿಷ್ಟರು ಮತ್ತು ಸಾಮಾನ್ಯ ವರ್ಗದ ಜನರ ಮಧ್ಯೆ ಸರಕಾರಿ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಈ ಸಂಬಂಧ ಮೆಸ್ಕಾಂ ಎಂ.ಡಿ.ಗೆ ದೂರು ನೀಡಲು ನಿರ್ಣಯ ಕೈಗೊಳ್ಳಲಾಗುವುದು ಎನ್ನುತ್ತಿದ್ದಂತೆ, ಜಿ.ಪಂ. ಸದಸ್ಯೆ ಶಿಲ್ಪಾ ಅವರು, ಆವತಿ, ಮಲ್ಲಂದೂರು, ಬಸರವಳ್ಳಿ ಗ್ರಾಮಗಳಲ್ಲೂ ಬಡಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ದೂರಿದರು. ಮತ್ತೆ ಕೆಲ ಸದಸ್ಯರು ಮೆಸ್ಕಾಂ ಅಧಿಕಾರಿಗಳು ಜನಪ್ರತಿನಿಧಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ ಎಂದು ದೂರು ಹೇಳಿದರು.
ಇದೇ ವೇಳೆ ಮಾತನಾಡಿದ ಮೆಸ್ಕಾಂ ಎಇ, ಯೋಜನೆಯಡಿಯಲ್ಲಿ ಈಗಾಗಲೇ ಶೃಂಗೇರಿ ತಾಲೂಕಿನಲ್ಲಿ 200ಕ್ಕೂ ಹೆಚ್ಚ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಕೈಬಿಟ್ಟು ಹೋಗಿರುವ ಪರಿಶಿಷ್ಟರ ಮನೆಗಳ ಬಗ್ಗೆ ಪರಿಶೀಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸಮಜಾಯಿಸಿ ನೀಡಿದರು. ಅಧಿಕಾರಿ ಮಾತಿಗೆ ಗರಂ ಆದ ಸಿಇಒ ಅಶ್ವತಿ, ಮೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾದಾನ ವ್ಯಕ್ತಪಡಿಸಿ, ಮುಂದಿನ 15 ದಿನಗಳ ಒಳಗೆ ಬಾಕಿ ಇರುವ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು. ಇದಕ್ಕೆ ಜಿ.ಪಂ. ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಆನಂದಪ್ಪ ಸಹಮತಿ ಸೂಚಿಸಿದರು.
ನಂತರ ನಡೆದ ಚರ್ಚೆಯಲ್ಲಿ ಜಿ.ಪಂ. ಸದಸ್ಯ ಪ್ರಭಾಕರ್ ಹಾಗೂ ಶಾಮಣ್ಣ ಮಾತನಾಡಿ, ಕಳಸ ತಾಲೂಕು ಘೋಷಣೆಯಾಗಿದ್ದು, ಜಿಲ್ಲಾಡಳಿತವು ಕುದುರೆಮುಖದ ಟೌನ್‍ಶಿಪ್ ಬಳಸಿಕೊಂಡು ಕಳಸ ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಕಳಸ ಭಾಗದ ಜನರು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕಲಿದ್ದಾರೆಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಈ ಸಮಸ್ಯೆಗೆ ಜಿಲ್ಲಾಡಳಿತವೇ ಪರಿಹಾರ ಕಂಡುಕೊಳ್ಳಬೇಕು. ಈ ಸಂಬಂಧ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳಿಸಲಾಗುವುದು ಎಂದು ಸಮಾಜಾಯಿಸಿ ನೀಡಿದರು.
ಚಿಕ್ಕಮಗಳೂರು ತಾಪಂ ಅಧ್ಯಕ್ಷ ಜಯಣ್ಣ ಮಾತನಾಡಿ, ತಾಲೂಕಿನ ಬಿಇಒ ಶಿಕ್ಷಣ ಇಲಾಖೆಗೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಕೆಲ ಅನುದಾನಗಳನ್ನು ನಿಯಮ ಮೀರಿ ಟೆಂಡರ್ ಕರೆದು ತಮಗೆ ಬೇಕಾದವರಿಗೆ ಕಾಮಗಾರಿ ಟೆಂಡರ್ ನೀಡಿದ್ದಾರೆ. ಬಳಕೆಯಾಗದ ಅನುದಾನ ಸರಕಾರಕ್ಕೆ ಹಿಂದಿರುಗಿ ಹೋಗಿದೆ. ಬಿಇಒ ಶರಶ್ಚಂದ್ರ ಅವರು ಮನಬಂದಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ಅಮಾನತಿನಲ್ಲಿಟ್ಟು, ಬೇರೆ ಅಧಿಕಾರಿಯನ್ನು ನೇಮಕ ಮಾಡಲು ಕ್ರಮಕೈಗೊಳ್ಳಬೇಕೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಅಶ್ವತಿ, ಬಿಇಒ ಕರ್ತವ್ಯ ಲೋಪ ಗಮನಕ್ಕೆ ಬಂದಿದೆ. ಡಿಡಿಪಿಯು ಈ ಸಂಬಂಧ ವರದಿ ನೀಡಿದ್ದಾರೆ. ಆದರೆ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ್‍ಗೆ ಅಧಿಕಾರವಿಲ್ಲ. ಈ ಸಂಬಂಧ ವರದಿಯನ್ನು ಸರಕಾರಕ್ಕೆ ಕಳಿಸಲಾಗುವುದು ಎಂದರು.
ನಂತರ ನಡೆದ ಚರ್ಚೆಯಲ್ಲಿ, ಮಲೆನಾಡು ಭಾಗದಲ್ಲಿ ಕಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮೂಡಿಗೆರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿಗೆ ತತ್ವಾರ ಆರಂಭವಾಗಿದೆ. ತಾಲೂಕು ಆಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮಕೈಗೊಂಡಿಲ್ಲ. ಬಯಲುಸೀಮೆಗೆ ಟ್ಯಾಂಕರ್ ನೀರು ನೀಡುತ್ತಿದ್ದು, ಮಲೆನಾಡಿಗೆ ಟ್ಯಾಂಕರ್ ನೀರು ಪೂರೈಕೆಗೆ ಇರುವ ಅಡ್ಡಿಯಾದರೂ ಏನೆಂದು ಜಿ.ಪಂ. ಸದಸ್ಯ ಶ್ಯಾಮಣ್ಣ ಸಭೆಯ ಗಮನ ಸೆಳೆದರು. ಇದಕ್ಕೆ ಪೂರಕವಾಗಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಲ್ಲೂ ಟ್ಯಾಂಕರ್ ನೀರು ಪೂರೈಕೆ ಮಾಡುವ ಸ್ಥಿತಿ ಎದುರಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಮಲೆನಾಡು ಭಾಗದಲ್ಲಿ ಟ್ಯಾಂಕರ್ ನೀರು ಪೂರೈಕೆಗೆ ನಿರ್ಬಂಧವಿಲ್ಲ, ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಅಗತ್ಯವಿರುವ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲು ಅವಕಾಶವಿದೆ ಎಂದರು.
ಇದೇ ವೇಳೆ ಕೆಲ ಜಿ.ಪಂ. ಸದಸ್ಯರು ಮಾತನಾಡಿ, ಟ್ಯಾಂಕರ್ ನೀರು ಪೂರೈಕೆ ಮಾಡಲು ಕೆಲ ಖಾಸಗಿ ಬೋರ್ ವೆಲ್ ಮಾಲಕರು ನೀರು ನೀಡಿದ್ದಾರೆ. ಆದರೆ ಇಂತಹವರಿಗೆ ಬಿಲ್ ಪಾವತಿಯಾಗುತ್ತಿಲ್ಲ ಎಂದು ದೂರಿದರು.
ತರೀಕೆರೆ ಜಿ.ಪಂ. ಕ್ಷೇತ್ರದ ಸದಸ್ಯೆ ಚೈತ್ರಶ್ರೀ ಮಾತನಾಡಿ, ಲಕ್ಕವಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರು ಪೂರೈಕೆಗಾಗಿ ಕರಕುಚ್ಚಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದರೂ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದು ದೂರಿದರೆ, ಕಳಸದಲ್ಲೂ ಈ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಪ್ರಭಾಕರ್ ದೂರಿದರು. ಇದಕ್ಕೆ ಉತ್ತರಿಸಿದ ಕುಡಿಯುವ ನೀರು ಪೂರೈಕೆ ಇಂಜಿನಿಯರ್, ಕರಕುಚ್ಚಿ ಗ್ರಾಮದ ಕಾಮಗಾರಿಗೆ ಶೀಘ್ರ ಮರು ಟೆಂಡರ್ ಕರೆಯಲಾಗುವುದು. ಕಳಸ ಸೇರಿದಂತೆ ಉಳಿದೆರೆಡು ಯೋಜನೆಗಳನ್ನು ಜುಲೈ ಅಂತ್ಯದೊಳೆಗ ಪೂರ್ಣಗೊಳಿಸಲಾಗುವುದು ಎಂದರು.
ಸಭೆಯಲ್ಲಿ, ಗೌಡನಹಳ್ಳಿ ಗ್ರಾಮದಲ್ಲಿ ಡೆಂಗ್ ರೋಗ ಉಲ್ಬಣವಾಗುತ್ತಿರುವುದು, ತೆಂಗಿನ ಮರಗಳ ರೋಗಕ್ಕೆ ಪರಿಹಾರಧನ ವಿತರಣೆ, ಜಿ.ಪಂ. ಸದಸ್ಯರ ಅನುದಾನ ಕಡಿತ, ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಗಳು, ಅಂಗನವಾಡಿ ಮಕ್ಕಳಿಗೆ ಔಷಧ ನೀಡುವಲ್ಲಿ ನಿರ್ಲಕ್ಷ್ಯ, ಸರಕಾರಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಸೇರಿದಂತೆ ಅನುಪಾಲನಾ ವರದಿ ಬಗ್ಗೆ ಸಭೆಯಲ್ಲಿ ಜನಪ್ರತಿನಿಧಿಗಳು ಗಮನ ಸೆಳೆದರು. ಸಭೆಯಲ್ಲಿ ಶೃಂಗೇರಿ ಕ್ಷೇತ್ರ ಶಾಸಕ ಹಾಗೂ ಮಲೆನಡು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಡಿ.ರಾಜೇಗೌಡ, ಜಿ.ಪಂ. ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿ.ಪಂ. ಸದಸ್ಯರು ಉಪಸ್ಥಿತರಿದ್ದರು.
ಚಿಕ್ಕಮಗಳೂರ ತಾಲೂಕಿನ ಬಿಇಒ ಶರಶ್ಚಂದ್ರ ಸರಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿ, ಮದ್ಯ, ಬಿರಿಯಾನಿ ಸೇವಿಸಿದ್ದಾರೆಂದು ತಾಪಂ ಸದಸ್ಯ ಪೊಟೊ ದಾಖಲೆಗಳ ಸಹಿತ ಸಭೆಯಲ್ಲಿ ದೂರಿದರು. ಅಲ್ಲದೇ ಬಿಇಒ ಸ್ವೇಚ್ಛಾಚಾರದಿಂದ ಅಧಿಕಾರ ಚಲಾಯಿಸುತ್ತಿದ್ದಾರೆ. ಸರಕಾರಿ ಅನುದಾನದ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ದೂರಿದರು. ಇದನ್ನು ಬೆಂಬಲಿಸ ಮಾತನಾಡಿದ ಜಿ.ಪಂ. ಸದಸ್ಯ ಬೆಳವಾಡಿ ರವೀಂದ್ರ, ಬಿಇಒ ಶರಶ್ಚಂದ್ರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಿಕ್ಷಕರಿಗೆ ಆದೇಶ ಹೊರಡಿಸುತ್ತಾರೆ. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಗೌರವ ನೀಡುತ್ತಿಲ್ಲ. ಇಂತಹ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳಿಸಬೇಕು. ಅವರ ಸ್ಥಾನಕ್ಕೆ ಬೇರೆ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಬಿಇಒ ಸರಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿದ ಪೊಟೊಗಳನ್ನು ವೀಕ್ಷಿಸಿದ ಜಿ.ಪಂ. ಅಧ್ಯಕ್ಷೆ ಬಿಇಒ ವಿರುದ್ಧ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದೆಂದು ಭರವಸೆ ನೀಡಿದರು.
ಜಿ.ಪಂ. ಸವ ಸದಸ್ಯರ ಸಭೆಯ ಮಧ್ಯದಲ್ಲಿ ಕೆಲ ಜಿ.ಪಂ. ಸದಸ್ಯರು ಏಕಕಾಲದಲ್ಲಿ ಮಾತನಾಡಲು ಮುಂದಾದರು. ಈ ವೇಳೆ ಸಭೆಯಲ್ಲಿ ಗೊಂದಲ, ಗದ್ದಲ ಏರ್ಪಟ್ಟಿತ್ತು. ಜಿ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಒಬ್ಬೊಬ್ಬರಾಗಿ ಮಾತನಾಡಿ ಎಂದು ಸೂಚಿಸಿದರೂ ಸದಸ್ಯರು ಇದನ್ನು ಕಿವಿಗೆ ಹಾಕಿಕೊಳ್ಳದೇ ಮಾತನಾಡುತ್ತಲೇ ಇದ್ದರು. ಈ ವೇಳೆ ಜಿ.ಪಂ. ಅಧ್ಯಕ್ಷೆ 10 ನಿಮಿಷಗಳ ಕಾಲ ಸಭೆ ಮುಂದೂಡಿದ ಘಟನೆ ನಡೆಯಿತು.
ಮಲೆನಾಡು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಜಿ.ಪಂ. ಸದಸ್ಯರಿಗೆ ಸದ್ಯ ಸಿಗುತ್ತಿರುವ ಸರಕಾರದ ಅನುದಾನ ಸಾಲುತ್ತಿಲ್ಲ. ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಲೆನಾಡಿನವರೇ ಆದ ಶಾಸಕ ಟಿ.ಡಿ.ರಾಜೇಗೌಡ ನೇಮಕವಾಗಿರುವುದು ಸಂತಸದ ವಿಚಾರ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವುಹೊಂದಿರುವ ಅವರು ಜಿಲ್ಲೆಗೆ ಹೆಚ್ಚು ಅನುದಾನ ತರುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹಾಕಬೇಕು.
- ಮಹೇಶ್ ಒಡೆಯರ್, ಜಿ.ಪಂ. ಸದಸ್ಯ







