ಮಾಧ್ಯಮಗಳು ಆಡಳಿತ ಪಕ್ಷದ ಮುದ್ದು ನಾಯಿಗಳಂತೆ ವರ್ತಿಸುತ್ತಿವೆ: ಹಿರಿಯ ಪತ್ರಕರ್ತ ಡಿ.ಉಮಾಪತಿ
"ಪ್ರಭುತ್ವವೇ ಜನರ ನಡುವೆ ದ್ವೇಷ ಬಿತ್ತುತ್ತಿದೆ"

ಬೆಂಗಳೂರು, ಜೂ.28: ದೇಶದ ಚುಕ್ಕಾಣಿ ಹಿಡಿದಿರುವ ಪ್ರಭುತ್ವವೆ ಜನರ ನಡುವೆ ದ್ವೇಷ ಬಿತ್ತುವಂತಹ ವಾತಾವರಣ ನಿರ್ಮಿಸುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಆಡಳಿತ ಪಕ್ಷದ ಮುದ್ದು ನಾಯಿಯಂತೆ ವರ್ತಿಸುತ್ತಿವೆ ಎಂದು ಹಿರಿಯ ಪತ್ರಕರ್ತ ಉಮಾಪತಿ ವಿಷಾದಿಸಿದರು.
ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತು ದೇಶದ ಜನತೆಯ ಚಿಂತನೆಯನ್ನು ಸರಕಾರ ಹಾಗೂ ಕಾರ್ಪೊರೇಟ್ ಶಕ್ತಿಗಳು ಮಾಧ್ಯಮಗಳ ಮೂಲಕ ತಮಗೆ ಸರಿಯೆನಿಸಿದ ರೀತಿಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಆಡಳಿತ ವರ್ಗವು ಅಧಿಕಾರ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿಗಳು ಸಂಪತ್ತನ್ನು ಕಬಳಿಸುವುದಕ್ಕಾಗಿ ಜನತೆಯ ಚಿಂತನೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇದಕ್ಕಾಗಿ ಕೋಮುವಾದ, ಭಯೋತ್ಪಾದನೆ, ವಲಸೆಗಾರರು ಎಂಬ ಕಾಲ್ಪನಿಕ ಸುಳ್ಳುಗಳನ್ನು ಜನತೆಯ ತಲೆಯಲ್ಲಿ ತುಂಬಲು ಮಾಧ್ಯಮಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಮಾಧ್ಯಮಗಳನ್ನು ಆಡಳಿತ ಪಕ್ಷದ ಕಾವಲು ನಾಯಿಯೆಂದು ಕರೆಯಲಾಗುತ್ತಿತ್ತು. ಈಗ ಕಾವಲು ನಾಯಿ ಸತ್ತು ಹೋಗಿದ್ದು, ಅದರ ಜಾಗದಲ್ಲಿ ಮುದ್ದುನಾಯಿ ಬಂದು ಕುಳಿತಿದೆ. ಇದು ಆಡಳಿತ ಪಕ್ಷದ ವೈಫಲ್ಯವನ್ನು ಪ್ರಶ್ನಿಸುವ ವಿರೋಧ ಪಕ್ಷಗಳನ್ನು, ಸಮಾಜಪರ ಹೋರಾಟಗಳಲ್ಲಿ ತೊಡಗಿರುವವರನ್ನು ಬೇಟೆಯಾಗುತ್ತಿದೆ ಎಂದು ಅವರು ಹೇಳಿದರು.
ಸಂವಿಧಾನವನ್ನು ಬಾಯಿ ಮಾತಿನಲ್ಲಿ ಹೊಗಳುತ್ತಲೆ ಅದನ್ನು ನಾಶ ಮಾಡುವಂತಹ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಂವಿಧಾನದ ಪ್ರತಿಗಳನ್ನು ಬಹಿರಂಗವಾಗಿ ಸುಟ್ಟು ಹಾಕಿದರೂ ಅದನ್ನು ವಿರೋಧಿಸಿ ಒಂದು ಮಾತನಾಡದ ಸರಕಾರದ ಮುಖ್ಯಸ್ಥರು ಮೌನ ಒಪ್ಪಿಗೆ ನೀಡುತ್ತಾರೆ. ಅವರ ನುಡಿ ಹಾಗೂ ನಡೆಯಲ್ಲಿ ಬಹಳಷ್ಟು ಅಂತರವಿರುವುದನ್ನು ಹಲವು ಪ್ರಕರಣಗಳಲ್ಲಿ ಗಮನಿಸಬಹುದಾಗಿದೆ ಎಂದು ಅವರು ಹೇಳಿದರು.
ಅವಧಿ ಬ್ಲಾಗ್ ಸಂಪಾದಕ ಜಿ.ಎನ್.ಮೋಹನ್ ಮಾತನಾಡಿ, ಇವತ್ತು ಮಾಧ್ಯಮ ಉದ್ಯಮವಾಗಿದೆ. ಸುದ್ದಿಯ ಜಾಗದಲ್ಲಿ ಮನರಂಜನೆ ಹಾಗೂ ಮಾಹಿತಿ ಸಮ್ಮಿಶ್ರಗೊಂಡು ಕಾರ್ಪೊರೇಟ್ ಉತ್ಪನ್ನಗಳನ್ನು ಮಾರಾಟ ಮಾಡುವ ಜಾಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಬೆಳವಣಿಗೆಗೆ ಪೂರಕವಾದ ಸುದ್ದಿಯನ್ನು ಬೆನ್ನಟ್ಟಿ ಹೋಗುವುದು ಸವಾಲಿನ ಕೆಲಸವಾಗಿದೆ ಎಂದರು.
ಅಮೆರಿಕಾದಂತಹ ಮುಂದುವರೆದ ದೇಶಕ್ಕೆ ಮಾಧ್ಯಮಗಳಿಂದ ಸಮಾಜಪರ ಆಶಯಗಳನ್ನು ನಿರೀಕ್ಷಿಸುವುದು ತೀರ ಅಗತ್ಯವಿಲ್ಲವಾದರೂ, ತೃತೀಯ ಜಗತ್ತಿನ, ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಭಾರತಕ್ಕೆ ಮಾಧ್ಯಮಗಳಿಂದ ಸಾಕಷ್ಟು ನಿರೀಕ್ಷೆಗಳಿವೆ. ಸಮಾಜಕ್ಕೆ ಹಾಗೂ ಸರಕಾರಕ್ಕೆ ಸೇತುವೆಯಾಗಬೇಕಾದ ಅಗತ್ಯವಿದೆ. ಆದರೆ, ನಮ್ಮ ಮಾಧ್ಯಮಗಳು ಆ ಕಡೆಗೆ ಹೋಗದೆ ಬಂಡವಾಳಶಾಹಿಯ ಹಿತಾಸಕ್ತಿಯಲ್ಲಿ ಸಿಲುಕಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಾನಂದ ತಗಡೂರು, ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತಿತರರಿದ್ದರು.
ಆಡಳಿತ ಪಕ್ಷ ಹಾಗೂ ಕಾರ್ಪೊರೇಟ್ ಶಕ್ತಿಗಳ ಬಾಲಂಗೋಚಿಯಾಗಿರುವ ಮಾಧ್ಯಮಗಳಿಂದ ದಲಿತರ, ಆದಿವಾಸಿಗಳ, ನಿಗರ್ತಿಕರ ಪರವಾದ ಸುದ್ದಿಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ದೇಶದೆಲ್ಲೆಡೆ ಸಣ್ಣ ಪ್ರಮಾಣದಲ್ಲಿ ಪರ್ಯಾಯ ಮಾಧ್ಯಮಗಳು ಬೆಳವಣಿಗೆಯಾಗುತ್ತಿದ್ದು, ಅದರಿಂದ ಮಾತ್ರ ಜನಪರ ಆಶಯಗಳನ್ನು ನಿರೀಕ್ಷಿಸಬಹುದಾಗಿದೆ.
-ಉಮಾಪತಿ.ಡಿ., ಹಿರಿಯ ಪತ್ರಕರ್ತರು







