ಡೇಟಾ ಲೋಕಲೈಸೇಶನ್: ಭಾರತ, ಚೀನಾಕ್ಕೆ ಟ್ರಂಪ್ ಸ್ಪಷ್ಟ ಸಂದೇಶ

ಒಸಾಕ, ಜೂ. 28: ತಂತ್ರಜ್ಞಾನ ಕಂಪೆನಿಗಳು ತಮ್ಮ ಸರ್ವರ್‌ಗಳನ್ನು ನಮ್ಮ ದೇಶಗಳಲ್ಲಿಯೇ ಇಡಬೇಕು (ಡೇಟಾ ಲೋಕಲೈಸೇಶನ್) ಎಂಬುದಾಗಿ ಒತ್ತಾಯಿಸುತ್ತಿರುವ ಭಾರತ ಮತ್ತು ಚೀನಾಗಳಿಗೆ ಅಮೆರಿಕ ಅಧ್ಯಕ್ಷರು ಶುಕ್ರವಾರ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದು, ಈ ಕ್ರಮವು ಡಿಜಿಟಲ್ ವ್ಯಾಪಾರದ ಹರಿವಿಗೆ ತಡೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
‘‘ಅಮೆರಿಕವು ದತ್ತಾಂಶ (ಡೇಟಾ)ಗಳ ಮುಕ್ತ ಹರಿಯುವಿಕೆಯ ಪರವಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಭಾಗೀದಾರರೊಂದಿಗೆ ಕೆಲಸ ಮಾಡಲು ಉತ್ಸುಕವಾಗಿದೆ’’ ಎಂದು ಅವರು ಹೇಳಿದರು.
ಜಪಾನ್‌ನ ಒಸಾಕ ನಗರದಲ್ಲಿ ಇಂದು ಆರಂಭಗೊಂಡ ಜಿ20 ಶೃಂಗ ಸಮ್ಮೇಳನದ ಭಾಗವಾಗಿ ನಡೆದ ‘ಡಿಜಿಟಲ್ ಎಕಾನಮಿ’ ಕುರಿತ ವಿಶೇಷ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.
‘‘ದತ್ತಾಂಶಗಳ ಮುಕ್ತ ಹರಿಯುವಿಕೆ, ಬಲವಾದ ಖಾಸಗಿತನ ಮತ್ತು ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ, ಬಂಡವಾಳ ಪಡೆಯಲು ಅವಕಾಶ ಮತ್ತು ಹೊಸತನದಿಂದಾಗಿ ಡಿಜಿಟಲ್ ಆರ್ಥಿಕತೆಯಲ್ಲಿ ಅಮೆರಿಕ ಯಶಸ್ಸು ಕಂಡಿದೆ’’ ಎಂದು ಟ್ರಂಪ್ ಹೇಳಿದರು.
‘‘ಡಿಜಿಟಲ್ ವ್ಯಾಪಾರದಲ್ಲಿ ಇದೇ ನೀತಿಯನ್ನು ದೀರ್ಘಕಾಲೀನ ಭವಿಷ್ಯಕ್ಕೂ ಮುಂದುವರಿಸಲು ಅಮೆರಿಕ ಬದ್ಧವಾಗಿದೆ’’ ಎಂದರು.







