ಎಚ್‌ಡಿಕೆ ವಿರುದ್ಧ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ ಆರೋಪ: ಸೂಕ್ತ ದಾಖಲೆ ನೀಡಲು ಅರ್ಜಿದಾರನಿಗೆ ಕೋರ್ಟ್ ಸೂಚನೆ
ಬೆಂಗಳೂರು, ಜೂ.28: ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆಂಬ ಆರೋಪ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ಅರ್ಜಿದಾರನಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಿರುವ ಪ್ರಮಾಣಪತ್ರವನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಹಾಗೂ ತನಿಖೆಗೆ ಸೂಕ್ತ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕೆಂದು ಕೋರಿ ಪ್ರಜ್ಞಾವಂತ ನಾಗರಿಕ ಸಮಿತಿ ಅಧ್ಯಕ್ಷ ಆನಂದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಅವರು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ ಪ್ರಮಾಣಪತ್ರವನ್ನು ಸಾಕ್ಷಿಯಾಗಿ ಪರಿಗಣಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿ, ಮನವಿಯನ್ನು ತಿರಸ್ಕರಿಸಿತು.
ಪ್ರಕರಣವೇನು: ಎಚ್‌ಡಿಕೆ ವಿರುದ್ದ ಆನಂದ್ ಎಪ್ರಿಲ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ಎಚ್‌ಡಿಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳ ಕಾಯ್ದೆ 125ಎ ಐಪಿಸಿ 181ರ ಅಡಿ ಕ್ರಮಕ್ಕೆ ಆನಂದ್ ಮನವಿ ಮಾಡಿದ್ದರು.







