ಕಳೆದ ಐದು ವರ್ಷಗಳಲ್ಲಿ ಆನೆ ದಾಳಿಗೆ 2,300 ಮಂದಿ ಸಾವು: ಪರಿಸರ ಸಚಿವಾಲಯ

ಹೊಸದಿಲ್ಲಿ, ಜೂ. 28: ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ಆನೆಗಳ ದಾಳಿಯಿಂದ 2,300 ಮಂದಿ ಹಾಗೂ ಹುಲಿಗಳ ದಾಳಿಯಿಂದ 200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿತು.
ಕಳೆದ ವರ್ಷವೊಂದರಲ್ಲೇ ಆನೆಗಳ ದಾಳಿಯಿಂದ 494 ಜನರು ಮೃತಪಟ್ಟಿದ್ದಾರೆ ಎಂದು ಸಚಿವಾಲಯಕ್ಕೆ ಮಾಹಿತಿ ನೀಡಲಾಯಿತು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿಸರ ಖಾತೆಯ ಸಹಾಯಕ ಸಚಿವ ಬಾಬುಲ್ ಸುಪ್ರಿಯೊ, ಮಾನವ-ಆನೆಗಳ ಸಂಘರ್ಷದಿಂದ 2014ರಿಂದ 2019 ಮಾರ್ಚ್ 31ರ ವರೆಗೆ 2,398 ಜನರು ಮೃತಪಟ್ಟಿದ್ದಾರೆ. ಕಳೆದ 5 ವರ್ಷಗಳಲ್ಲಿ ಪಶ್ಚಿಮಬಂಗಾಳದಲ್ಲಿ ಅತ್ಯಧಿಕ 403 ಜನರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನೆ ದಾಳಿಗೆ ಮೃತಪಟ್ಟ ಸಂಖ್ಯೆಯಲ್ಲಿ 2ನೇ ಸ್ಥಾನವನ್ನು ನಾಗಾಲ್ಯಾಂಡ್ ಪಡೆದುಕೊಂಡಿದೆ. ಇಲ್ಲಿ 397 ಜನರು ಮೃತಪಟ್ಟಿದ್ದಾರೆ. 3 ಸ್ಥಾನವನ್ನು ಜಾರ್ಖಂಡ್ ಪಡೆದುಕೊಂಡಿದೆ. ಇಲ್ಲಿ 349 ಜನರು ಮೃತಪಟ್ಟಿದ್ದಾರೆ ಎಂದು ಹೇಳಿದರು. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಆನೆಗಳು ಹಾಗೂ ಹುಲಿಗಳಿಂದ ಎಷ್ಟು ಮಾನವರ ಸಾವು ಸಂಭವಿಸಿದೆ ಎಂದು ಕೇರಳದ ಕಾಂಗ್ರೆಸ್ ಸಂಸದ ಆ್ಯಂಟೊ ಆಂಟೋನಿಯೋ ಕೇಳಿದ ಪ್ರಶ್ನೆಗೆ ಸುಪ್ರಿಯೊ ಅವರು ಲಿಖಿತ ಉತ್ತರದಲ್ಲಿ ಈ ದತ್ತಾಂಶ ಹಂಚಿಕೊಂಡರು.





