ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಎಸ್ಪಿ ಸುಮನ ವಿಚಾರಣೆ
ಉಡುಪಿ, ಜೂ.28: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಆಗಿನ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಪ್ರಸ್ತುತ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸುಮನ ಡಿ.ಪಿ. ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿಕೆಯನ್ನು ನೀಡಿದರು.
2015ರಿಂದ 2016ರವರೆಗಿನ ಅವಧಿಯಲ್ಲಿ ಕಾರ್ಕಳ ಪೊಲೀಸ್ ಸಹಾಯಕ ಅಧೀಕ್ಷಕಿಯಾಗಿದ್ದ ಇವರ ಮುಖ್ಯ ವಿಚಾರಣೆಯನ್ನು ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ನಡೆಸಿದರು. ಆರೋಪಿ ಪರ ವಕೀಲರಾದ ವಿಕ್ರಂ ಹೆಗ್ಡೆ ಹಾಗೂ ಅರುಣ್ ಬಂಗೇರ ಎಸ್ಪಿ ಸುಮನ ಅವರ ಅಡ್ಡ ವಿಚಾರಣೆ ನಡೆಸಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ಇವರ ವಿಚಾರಣೆ ನಡೆಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದ ಸವಿವರವಾದ ಸಾಕ್ಷಿ ಹೇಳಿಕೆಯನ್ನು ಸುಮನಾ ನ್ಯಾಯಾ ಲಯದ ಮುಂದೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿ, ಸಾಕ್ಷಿ ನಾಶದ ಆರೋಪಿ ರಾಘವೇಂದ್ರ ಮತ್ತು ಜೈಲಿನಲ್ಲಿರುವ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ವಿಡೀಯೋ ಕಾನ್ಪರೇನ್ಸ್‌ನಲ್ಲಿ ಹಾಜರಿದ್ದರು.
ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರು ಜು.30 ಮತ್ತು 31ಕ್ಕೆ ನಿಗದಿ ಪಡಿಸಲಾಯಿತು. ವಿಚಾರಣೆಯು ಅಂತಿಮ ಹಂತಕ್ಕೆ ಬಂದಿದ್ದು, ಆ ದಿನ ಕೊನೆಯದಾಗಿ ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಓಡಿ ಡಿವೈಎಸ್ಪಿ ಚಂದ್ರ ಶೇಖರ್ ಸಹಿತ ನಾಲ್ವರ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಾಮೀನು ಕೋರಿ ಅರ್ಜಿ
ಪ್ರಕರಣದ ಆರೋಪಿ ನವನೀತ್ ಶೆಟ್ಟಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಮುಂದಿನ ವಿಚಾರಣೆಯನ್ನು ಜು.12ಕ್ಕೆ ಮುಂದೂಡಿ ನ್ಯಾಯಾಧೀಶ ಜೋಶಿ ಆದೇಶ ನೀಡಿದರು. ನವನೀತ್ ಶೆಟ್ಟಿ ಈ ಹಿಂದೆ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿತ್ತು.







