ಅರಮನೆ ಆಸ್ತಿ ಖಾತೆ ಮಾಡಿಕೊಡಲು ಸರ್ಕಾರ ಸ್ಪಂದಿಸುತ್ತಿಲ್ಲ: ಪ್ರಮೋದಾ ದೇವಿ ಒಡೆಯರ್

ಮೈಸೂರು,ಜೂ.28: ಮೈಸೂರು ಅರಮನೆ ಆಸ್ತಿ ವ್ಯಾಜ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಹಳಬರು ಒಂದು ರೀತಿ ತೊಂದರೆ ಕೊಟ್ಟರೆ ಹೊಸಬರಿಂದ ಇನ್ನೊಂದು ರೀತಿ ತೊಂದರೆಯಾಗುತ್ತಿದೆ ಎಂದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಸರ್ಕಾರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಅರಮನೆ ಆವರಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೊಡ್ಡಕೆರೆ ಮೈದಾನದ ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೋರ್ಟ್ ನಮ್ಮಂತೆ ಆದೇಶ ನೀಡಿದ್ದರೂ ಖಾತೆ ಮಾಡಿಕೊಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಹಿಂದಿನ ಸರ್ಕಾರ ಒಂದು ರೀತಿ ತೊಂದರೆ ನೀಡಿದರೆ ಹೊಸ ಸರ್ಕಾರ ಮತ್ತೊಂದು ರೀತಿಯಲ್ಲಿ ತೊಂದರೆ ನೀಡುತ್ತಿದೆ. ನನಗೆ ರಾಜಕೀಯ ಗೊತ್ತು. ಆದರೆ ರಾಜಕಾರಣ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಕೆರೆ ಮೈದಾನದ ಪಕ್ಕದ ಆಸ್ತಿ ಖಾತೆ ಮಾಡಿಕೊಡಲು ಸರ್ಕಾರ ಸ್ಪಂದಿಸುತ್ತಿಲ್ಲ, ಸರ್ಕಾರ ಆಸ್ತಿ ನಮ್ಮದು ಎಂದು ಹೇಳುತ್ತಿದೆ. ಆದರೆ 1950ರಲ್ಲೆ ಕೇಂದ್ರ ಸರ್ಕಾರ ಆಸ್ತಿ ನಮಗೆ ವರ್ಗಾವಣೆ ಮಾಡಿದೆ. ಆದರೂ ಆಗಿನಿಂದಲೂ ನಮಗೆ ತೊಂದರೆ ನೀಡಲಾಗುತ್ತಿದೆ. ಈ ವಿಚಾರವಾಗಿ ಕೋರ್ಟ್ ನಮ್ಮ ಪರ ತೀರ್ಪು ನೀಡಿದ್ದರು ಸರ್ಕಾರ ಮಾತ್ರ ಖಾತೆ ಮಾಡಿಕೊಡುತ್ತಿಲ್ಲ ಎಂದು ಹೇಳಿದರು.
ಜಯಚಾಮರಾಜೇಂದ್ರ ಒಡೆಯರ್ ಹೆಸರಿನಲ್ಲಿ ಗ್ರಾಮ ದತ್ತು ಪಡೆಯುವ ವಿಚಾರಕ್ಕೆ ಮಾಧ್ಯಮದವರ ಸಲಹೆ ಪಡೆದ ಅವರು, ನಾನು ಶ್ರೀಕಂಠದತ್ತ ಒಡೆಯರ್ ನಾಲ್ಕು ಬಾರಿ ಚುನಾವಣೆ ಎದುರಿಸಿದಾಗ ಜನರ ಬಳಿ ಹೋಗಿದ್ದೇನೆ. ಸಾಮಾನ್ಯವಾಗಿ ನಾವು ಅವರಿಗೆ ಗೊತ್ತಿದ್ದರೂ ಅಷ್ಟು ಹತ್ತಿರ ಹೋಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮ ದತ್ತು ಪಡೆದು ಅಭಿವೃದ್ಧಿ ಮಾಡುವತ್ತ ಗಮನಹರಿಸುತ್ತೇವೆ ಎಂದು ಹೇಳಿದರು.
ಯದುವೀರ್ ಒಡೆಯರ್ ರಾಜಕೀಯ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಅವರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಅವರು ತೀರ್ಮಾನ ತೆಗೆದು ಕೊಳ್ಳುತ್ತಾರೆ. ನಾನು ನನ್ನ ಒಂದು ಅನಿಸಿಕೆಯನ್ನು ಮಾತ್ರ ಹೇಳುತ್ತಿದ್ದೇನೆ. ನನಗೆ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ ಎಂದರು. ಮುಂದಿನ ದಿನಗಳಲ್ಲಿ ಯದುವೀರ್ ನನ್ನ ಬಳಿ ವಿಷಯ ಪ್ರಸ್ತಾಪಿಸಿದರೆ ಸಲಹೆ ನೀಡುತ್ತೇನೆ ಎಂದು ಹೇಳಿದರು.







