ಭಟ್ಕಳದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ಹೆಸ್ಕಾಂ ಅಧಿಕಾರಿಗಳೊಂದಿಗೆ ಶಾಸಕ ಸುನಿಲ್ ನಾಯ್ಕ ಸಭೆ
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು ಜನಪ್ರತಿನಿಧಿಗಳು ಕೈಕಟ್ಟಿಕುಳಿತ್ತಿದ್ದಾರೆ ಎಂದು ವಿವಿಧ ಸಾಮಾಜಿಕ ಸಂಘಟನೆಯ ಮುಖಂಡರು, ಸಾರ್ವಜನಿಕರು ಆರೋಪಿಸುತ್ತಿದ್ದು ಕೂಡಲೇ ಎಚ್ಚೆತ್ತುಕೊಂಡ ಶಾಸಕ ಸುನಿಲ್ ನಾಯ್ಕ ಗುರುವಾರ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಪ್ರತಿ ವರ್ಷ ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ವಿದ್ಯುತ್ ಸಮಸ್ಯೆ ಅತಿಯಾಗಿ ಬಾಧಿಸುತ್ತದೆ. ಜನರು ಈ ಕುರಿತು ಶಾಸಕರನ್ನು ಪ್ರಶ್ನಿಸುತ್ತಾರೆ. ನನಗೆ ಜನರಿಗೆ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಸರ್ಕಾರದಿಂದಾಗುವ ಕೆಲಸವಿದ್ದರೆ ಹೇಳಿ ಸರ್ಕಾರದ ಬೇಡಿಕೆಗಳನ್ನು ಇಟ್ಟು ಅದನ್ನು ಮಂಜೂರು ಮಾಡಿಸಿ ಕೊಡುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮಹೇಶ್, ಮುರುಡೇಶ್ವರದಿಂದ ಭಟ್ಕಳಕ್ಕೆ 110ಕೆವಿ ಸಂಪರ್ಕಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಈ ಭಾಗದಲ್ಲಿ 30ಹೆಕ್ಕಟೇರ್ ಅರಣ್ಯಪ್ರದೇಶವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 5.20ಲಕ್ಷ ಹಣವನ್ನು ಕೇಂದ್ರಕ್ಕೆ ಭರಣ ಮಾಡಿದೆ. ಯೋಜನೆ ಮಾರ್ಪಾಡಾಗಿರುವುದರಿಂದ ಇನ್ನೂ ಹೆಚ್ಚುವರಿ 29ಲಕ್ಷ ರೂ ಪಾವಸಬೇಕಾಗುತ್ತದೆ. ಸದ್ಯದಲ್ಲೇ ಇದನ್ನೂ ಕೂಡ ಸರ್ಕಾರ ಪಾವತಿಸುತ್ತದೆ ಎಂಬ ಭರವಸೆ ಇದೆ. ಇದರ ನಂತರ ಕೂಡಲೇ ಕಾಮಾಗಾರಿಗೆ ಟೆಂಡರ್ ಕರೆಯುತ್ತೇವೆ. ಭಟ್ಕಳದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಲು ಪಕ್ಕದ ಕುಂದಾಪುರ ನಾವುಂದದಿಂದ ಭಟ್ಕಳಕ್ಕೆ 110 ಕೆವಿ ಜೋಡಣೆ ಅಗತ್ಯವಿದೆ. ಇದನ್ನು ಪ್ರತ್ಯೇಕ ಯೋಜನೆ ರೂಪಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ನಾಗಮ್ಮ ಮಾಸ್ತಿಗೊಂಡ, ಹೊನ್ನಾವರ ವಿಭಾಗದ ಹೆಸ್ಕಾಂ ಅಧಿಕಾರಿ ವಿನೋದ ಭಾಗ್ವರ್, ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್, ಸಹಾಯಕ ಅಭಿಯಂತರ ಶ್ರೀಕಾಂತ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. (ಫೋಟೊ: 28-ಬಿಕೆಎಲ್-04-ಹೆಸ್ಕಾಂ)





