ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಎಸ್ಡಿಪಿಐ ಒತ್ತಾಯ
ಪ್ರಚೋದನಕಾರಿ ಹೇಳಿಕೆ ಆರೋಪ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಕೋಮು ಪ್ರಚೋದನಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಎಸ್ ಡಿ ಪಿ ಐ ಒತ್ತಾಯಿಸಿದೆ.
ಗುರುವಾರ ಬೆಳ್ತಂಗಡಿಯ ಬಂದಾರು ಎಂಬಲ್ಲಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಗೋ ಸಾಗಾಟಗಾರರನ್ನು ತಡೆದು ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಉಪ್ಪಿನಂಗಡಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಈ ಮಧೈ ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಡರಾತ್ರಿ ಕೋಮು ಪ್ರಚೋದಕ ಮಾತುಗಳನ್ನು ಆಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಜನರನ್ನು ಸಂತೈಸುವುದು ಬಿಟ್ಟು ಕೋಮು ಪ್ರಚೋದನೆಗೆ ಹುಮ್ಮಸ್ಸು ತೋರಿಸಿ ಸಮಾಜದಲ್ಲಿ ಕೋಮು ಸಾಮರಸ್ಯ ಕೆಡಿಸುವ ಹಾಗೂ ಗಲಭೆಗೆ ಕಾರಣವಾಗುವ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಎಸ್ ಡಿ ಪಿ ಐ ಪ್ರಕಟನೆಯಲ್ಲಿ ಒತ್ತಾಯಿಸಿದೆ.





